ದೆಹಲಿಯಲ್ಲಿ ಬೀಡು ಬಿಟ್ಟ ಸಿದ್ದು ಮತ್ತು ಡಿಕೆಶಿ..!!

ಬೆಂಗಳೂರು

   ರಾಜ್ಯ ಕಾಂಗ್ರೆಸ್ ನಾಯಕರಿಬ್ಬರು ದಿಲ್ಲಿಯಲ್ಲಿ ಇದ್ದು,ಇಂದು ರಾಜ್ಯದ ವಿಚಾರವಾಗಿ ಅಲ್ಲಿನ ನಾಯಕರ ಜತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದು ಪ್ರತ್ಯೇಕವಾಗಿ ಎರಡು ಮಹತ್ವದ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಇದರಿಂದ ರಾಜ್ಯ ರಾಜಕಾರಣ ಹಾಗೂ ಇಲ್ಲಿನ ಕೆಲ ಸಮಸ್ಯೆಗೆ ಪರಿಹಾರ ಹುಡುಕುವ ಕಾರ್ಯ ಆಗಲಿದೆ.

     ಮಾಜಿ ಸಿಎಂ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಸಭೆ ನಡೆಸಿದರೆ,ಸಚಿವ ಡಿ.ಕೆ. ಶಿವಕುಮಾರ್ ರಾಜ್ಯದ ಸಂಸದರಿಗೆ ಔತಣಕೂಟ ಆಯೋಜಿಸಿದ್ದಾರೆ.ಸಂಸದ ಡಿ.ಕೆ. ಸುರೇಶ್ ನಿವಾಸದಲ್ಲಿ ಔತಣಕೂಟ ನಡೆಯಲಿದ್ದು,ಬಹುತೇಕ ಎಲ್ಲ ಸಂಸದರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

     ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿರನ್ನು ಭೇಟಿಯಾಗುವ ಮಾಜಿ ಸಿಎಂ ಸಿದ್ದರಾಮಯ್ಯ,ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು, ಚುನಾವಣೆ ನಂತರ ರಾಜ್ಯದಲ್ಲಿ ನಡೆದ ಬೆಳವಣಿಗೆಗಳು, ನಾಯಕರ ನಡವಳಿಕೆ, ಬಿಜೆಪಿಯಿಂದ ಸರ್ಕಾರ ಬೀಳಿಸುವ ಕಸರತ್ತು, ಜಿಂದಾಲ್ ಸಂಬಂಧ ಆರೋಪ ಪ್ರತ್ಯಾರೋಪ, ಸ್ವಪಕ್ಷೀಯರ ವಿರೋಧ ಇತ್ಯಾದಿ ವಿಚಾರಗಳು ಚರ್ಚೆಗೆ ಬರಲಿವೆ.

     ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ತಕ್ಷಣ ದೇಶದಿಂದ ವಿದೇಶಕ್ಕೆ ತೆರಳಿದ್ದ ರಾಹುಲ್ ಗಾಂಧಿ ವಾಪಸ್ ಆಗಿದ್ದು ,ಫಲಿತಾಂಶದ ನಂತರ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ-ರಾಹುಲ್ ನೇರವಾಗಿ ಭೇಟಿ ಮಾಡಿ ಚರ್ಚಿಸಲಿದ್ದಾರೆ.

     ಹಿಂದೆ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಭೇಟಿಯಾಗಿದ್ದರೂ ಪ್ರತ್ಯೇಕ ಮಾತುಕತೆ ನಡೆಸಿರಲಿಲ್ಲ.ಇದೀಗ ಆ ಅವಕಾಶ ಕೂಡಿ ಬಂದಿದೆ.ರಾಜ್ಯದಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ತೋರಿದ್ದು,10 ರಿಂದ 1ಸಂಖ್ಯಾಬಲ ಕುಸಿದಿದೆ.ರಾಜ್ಯದಿಂದ ನಿರೀಕ್ಷಿತ ಸಂಸದರನ್ನು ಕಳಿಸಿಕೊಡುವಲ್ಲಿ ವಿಫಲವಾಗಿದೆ.ಅಲ್ಲದೇ ರಾಜ್ಯದಲ್ಲಿ ಜೆಡಿಎಸ್ ಜತೆ ಮೈತ್ರಿ ಇದ್ದರೂ, ಅದು ಫಲ ಕೊಟ್ಟಿಲ್ಲ. ಇದರಿಂದ ಇಂದಿನ ಸಭೆಯಲ್ಲಿ ಸೋಲಿನ ಬಗ್ಗೆ ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆ ಇದೆ.

      ರಾಹುಲ್ ಗಾಂಧಿಯವರ ನಿವಾಸದಲ್ಲಿ ಸಭೆ ನಡೆಯಲಿದ್ದು,ಸಿದ್ದರಾಮಯ್ಯ ಜತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕೂಡ ಪಾಲ್ಗೊಳ್ಳುತ್ತಿದ್ದಾರೆ.ಇಂದು ಸಂಜೆಯೊಳಗೆ ಸಭೆ ಆಗುವ ನಿರೀಕ್ಷೆ ಹೊಂದಲಾಗಿದೆ.ರಾಜ್ಯ ಕಾಂಗ್ರೆಸ್‍ನಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಹತ್ವದ ಮಾತುಕತೆ ನಡೆಯಲಿದೆ ಎಂಬ ಮಾಹಿತಿ ಕೂಡ ಇದೆ.

       ಸದ್ಯ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲಿದೆ, ಮಲ್ಲಿಕಾರ್ಜುನ ಖರ್ಗೆ ಸಮನ್ವಯ ಸಮಿತಿಗೆ ಬರುತ್ತಾರೆ.ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರಾ ಗುತ್ತಾರೆ ಹಾಗೂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗುತ್ತಾರೆ ಎಂಬಿತ್ಯಾದಿ ಮಾತುಗಳು ಕೇಳಿಬರುತ್ತಿದೆ.

       ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಅಂಟಿನಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು,ಹೈಕಮಾಂಡ್ ಬಳಿ ಚರ್ಚೆ ನಡೆಸುವ ವಿಷಯಗಳ ಬಗ್ಗೆ ಅಂಟಿನಿಯವರಿಗೆ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.ಮಹದಾಯಿ, ಮೇಕೆದಾಟು ಇತ್ಯಾದಿ ಯೋಜನೆಗಳ ಕುರಿತು ರಾಜ್ಯದ ಸಂಸದರಿಗೆ ಒತ್ತಡ ಹೇರುವ ಸಲುವಾಗಿ ಸಂಸದರ ಔತಣಕೂಟ ವನ್ನು ಡಿಕೆಶಿ ಕರೆದಿದ್ದಾರೆ. ಇಂದು ರಾತ್ರಿ ಔತಣಕೂಟ ನಡೆಯಲಿದೆ.

         ಇದಕ್ಕು ಮೊದಲು ಸಂಸದ ಡಿ.ಕೆ. ಸುರೇಶ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಹಾಗೂ ಡಿ.ವಿ.ಸದಾನಂದಗೌಡರ ಬಳಿ ರಾಜ್ಯದ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap