ಸಿಡಿಲಿನ ಹೊಡೆತಕ್ಕೆ ಸುಟ್ಟು ಕರಕಲಾದ ವಿದ್ಯುತ್ ಉಪಕರಣಗಳು

ಗುಬ್ಬಿ

      ಸಿಡಿಲಿನ ಹೊಡೆತಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗಿ ಸುಮಾರು 15 ಕಂಪ್ಯೂಟರ್‍ಗಳು, ಜೆರಾಕ್ಸ್ ಯಂತ್ರ, ಯುಪಿಎಸ್ ಹಾಗೂ ಬ್ಯಾಟರಿಗಳು ಸುಟ್ಟು ಕರಕಲಾದ ಘಟನೆ ಶುಕ್ರವಾರ ರಾತ್ರಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದಿದೆ.

       ರಾತ್ರಿ 11 ರ ಸಮಯದಲ್ಲಿ ಭಾರಿ ಶಬ್ದದೊಂದಿಗೆ ಪಟ್ಟಣದ ಗಟ್ಟಿ ಲೇಔಟ್ ಬಡಾವಣೆಗೆ ಅಪ್ಪಳಿಸಿದ ಸಿಡಿಲಿಗೆ ಲಕ್ಷಾಂತರ ರೂ.ಗಳ ಗೃಹೋಪಯೋಗಿ ವಸ್ತುಗಳು ಸುಟ್ಟುಹೋದ ಘಟನೆ ಸ್ಥಳೀಯ ನಿವಾಸಿಗಳಿಗೆ ಶಾಕ್ ನೀಡಿದೆ. ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಹಿಂಬದಿಯ ಈ ಬಡಾವಣೆಯಲ್ಲಿ ರಾತ್ರಿ ಮಿಂಚು ಸಹಿತ ಬಡಿದ ಸಿಡಿಲಿಗೆ ಒಂದು ಮನೆಯ ಸೋಲಾರ್ ಸಿಸ್ಟಂ ಛಿದ್ರವಾಗಿದೆ. ಜತೆಗೆ ಹಲವಾರು ಮನೆಗಳಲ್ಲಿ ಟಿವಿ, ಫ್ರಿಡ್ಜ್, ಫ್ಯಾನ್, ಲೈಟ್‍ಗಳು, ಯುಪಿಎಸ್ ಹೀಗೆ ಅನೇಕ ವಸ್ತುಗಳು ಸುಟ್ಟು ಹೋಗಿವೆ.

      ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಕೊಠಡಿಯಲ್ಲಿ 15 ಗಣಕಯಂತ್ರ ಸಂಪೂರ್ಣ ಭಸ್ಮವಾಗಿವೆ. ಶನಿವಾರ ಬೆಳಗ್ಗೆ ಶಾಲೆಗೆ ಸಿಬ್ಬಂದಿ ನೋಡಿ, ಕೂಡಲೆ ಅಗ್ನಿಶಾಮಕದಳಕ್ಕೆ ವಿಷಯ ಮುಟ್ಟಿಸಿ, ಕರೆಸಿದ್ದಾರೆ. ಬೆಂಕಿ ನಂದಿಸುವ ಕೆಲಸವಾದರೂ ರಾತ್ರಿ ವೇಳೆ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಕರಕಲಾಗಿವೆ. ಇಡಿ ಕೊಠಡಿಯೇ ಕಪ್ಪು ಬಣ್ಣಕ್ಕೆ ತಿರುಗಿದ್ದು, ಜೆರಾಕ್ಸ್ ಯಂತ್ರ, ಬ್ಯಾಟರಿ, ಯುಪಿಎಸ್ ಜತೆಗೆ ವೈರಿಂಗ್ ವ್ಯವಸ್ಥೆಯೆ ಬೆಂಕಿಗೆ ಆಹುತಿಯಾಗಿದೆ. ಅಂದಾಜು 5 ಲಕ್ಷ ರೂ.ಗಳ ನಷ್ಟವನ್ನು ಇಲಾಖೆಯಿಂದ ತುಂಬಿಕೊಟ್ಟಲ್ಲಿ ಮಾತ್ರ ಮುಂದಿನ ಶೈಕ್ಷಣಿಕ ವರ್ಷದಲ್ಲಿ ನೂರಾರು ಹೆಣ್ಣು ಮಕ್ಕಳಿಗೆ ಕಂಪ್ಯೂಟರ್ ಕಲಿಕೆ ಸಾಧ್ಯ ಎಂದು ಎಸ್‍ಡಿಎಂಸಿ ಅಧ್ಯಕ್ಷ ಜಿ.ಆರ್.ರಮೇಶ್ ಮನವಿ ಮಾಡಿದರು.

      ಶಾಕ್‍ಗೆ ಒಳಗಾದ ಗಟ್ಟಿ ಲೇಔಟ್ ಬಡಾವಣೆ ನಿವಾಸಿಗಳು ಇನ್ನೂ ಚೇತರಿಸಿಕೊಳ್ಳಬೇಕಾಗಿದೆ. ಭಾರಿ ಶಬ್ದ ಆತಂಕ ತಂದಿದೆ. ಜತೆಗೆ ರಾತ್ರಿ ವಿದ್ಯುತ್ ಸರಬರಾಜು ಅವ್ಯವಸ್ಥೆಯಾಗಿದೆ. ಇಡೀ ಪಟ್ಟಣಕ್ಕೆ ಕೇಳಿಸಿದ ಭಾರಿ ಸಿಡಿಲು ಅಪ್ಪಳಿಸಿದ ಸ್ಥಳದಲ್ಲಿದ್ದ ನಿವಾಸಿಗಳ ಸ್ಥಿತಿ ಹೇಳತೀರದಾಗಿತ್ತು. ಶನಿವಾರ ಮುಂಜಾನೆ ಈ ಏರಿಯಾದಲ್ಲಿರುವ ಎಲ್ಲಾ ಮನೆಗಳಲ್ಲೂ ಸಿಡಿಲಿನ ಚರ್ಚೆ ನಡೆದಿತ್ತು. ಆಗಿರುವ ನಷ್ಟವನ್ನು ಲೆಕ್ಕಾಚಾರ ಮಾಡಲಾಗುತ್ತಿತ್ತು. ಎಂದಿಗೂ ಸಿಡಿಲಿನ ಬಡಿತವನ್ನು ಸಮೀಪದಲ್ಲಿ ಕೇಳಿರದ ನಿವಾಸಿಗಳು ಈಗಲೂ ಬೆಚ್ಚಿ ಬೀಳುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap