ಸಾಲಮನ್ನಾ ಕುರಿತ ಹೇಳಿಕೆ : “ಕೃಷಿ ಸಚಿವರ” ವಿರುದ್ಧ “ಹೆಚ್ ಡಿ ಕೆ” ಗರಂ

ಮೈಸೂರು

   ಸಾಲಮನ್ನಾ ಕುರಿತು ಹೇಳಿಕೆ ನೀಡಿದ್ದ ಕೃಷಿ ಸಚಿವ ಬಿ.ಸಿ ಪಾಟೀಲ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.ಕೃಷಿ ಸಚಿವರೇ ನಾಲಿಗೆ ಇದೆ ಅಂತ ತೆವಲಿಗೆ ಮಾತನಾಡಬೇಡಿ. ಸುಮ್ಮನೆ ಸುಳ್ಳು ಹೇಳಿಕೊಂಡು ಓಡಾಡಬೇಡಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ವಿರುದ್ದ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

     ಎಚ್.ಡಿ. ಕುಮಾರಸ್ವಾಮಿ ಬರೀ ಸಾಲಮನ್ನಾ ಘೋಷಣೆ ಮಾಡಿಹೋದರೇ ಹೊರತು ಅದಕ್ಕಾಗಿ ಸೂಕ್ತ ರೂಪು ರೇಷೆ ಸಿದ್ಧಪಡಿಸಲಿಲ್ಲ. ಬಾಯಿಗೆ ಬಂದಂತೆ ಘೋಷಣೆ ಮಾಡಿ ಹೋಗುವುದು ದೊಡ್ಡ ವಿಷಯವೇನಲ್ಲ ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿಕೆ ನೀಡಿದ್ದರು.

     ಈ ಕುರಿತು ಇಂದು ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಚ್.ಡಿ ಕುಮಾರಸ್ವಾಮಿ, ಆಯಪ್ಪನಿಗೆ ಸಾಲ ಮನ್ನಾದ ಬಗ್ಗೆ ಮಾಹಿತಿಯೇ ಇಲ್ಲ. ಸಾಲಮನ್ನಾದ ಬಗ್ಗೆ ಆ ಕೃಷಿ ಸಚಿವರಿಗೆ ವಿಷಯವೇ ಗೊತ್ತಿಲ್ಲ ಅನ್ನಿಸುತ್ತಿದೆ. ನಾನು ಅಧಿಕಾರದಿಂದ ಇಳಿಯುವಾಗ ಬರಿ ಘೋಷಣೆ ಮಾಡಿಲ್ಲ. ಬದಲಿಗೆ 25 ಸಾವಿರ ಕೋಟಿ ಹಣ ಹೊಂದಿಸಿ ಅಧಿಕಾರದಿಂದ ಇಳಿದಿದ್ದೇನೆ. ನಾನು ಹೊಂದಿಸಿಕೊಟ್ಟಿದ್ದ 800 ಕೋಟಿ ಹಣವನ್ನ ಇನ್ನು ಬಿಡುಗಡೆ ಮಾಡದೆ ಹಾಗೆಯೇ ಇಟ್ಟುಕೊಂಡಿದ್ದಾರೆ. ನಾವು ರೈತರಿಂದ ಸರಳ ದಾಖಲೆ ಕೇಳಿದ್ದೆವು. ರೈತರ ದಾಖಲೆ ತಪ್ಪಿದ್ದರೆ ಸರಿಪಡಿಸುವುದು ಇಲಾಖೆ ಕೆಲಸ. ಅದನ್ನ ಬಿಟ್ಟು ತೆವಲಿಗೆ ಮಾತನಾಡುವುದು, ಸುಳ್ಳು ಹೇಳಿಕೊಂಡು ಓಡಾಡೋದು ಬೇಡ ಎಂದು ಸಚಿವ ಬಿ.ಸಿ ಪಾಟೀಲ್ ಗೆ ಟಾಂಗ್ ಕೊಟ್ಟರು.

     ಬಿಜೆಪಿಯಿಂದ ಶಾದಿಭಾಗ್ಯ ಯೋಜನೆಗೆ ತಿಲಾಂಜಲಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಿಜೆಪಿ ಸರ್ಕಾರ ಶಾದಿ ಭಾಗ್ಯ ಒಂದೆ ಅಲ್ಲ ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯ ಸ್ಥಗಿತ ಮಾಡಿದೆ.‌ ಬೆಳಗಾವಿಯಲ್ಲಿ ಬಿಜೆಪಿ ಶಾಸಕರೇ ನನ್ನ ಕ್ಷೇತ್ರ ಅನುದಾನ ಬಂದಿಲ್ಲ ಅಂತ ಗಲಾಟೆ ಮಾಡಿದ್ದಾರೆ. ಅದು ಸಹ ಮಂತ್ರಿಯನ್ನು ಕೂರಿಸಿಕೊಂಡು ಅನುದಾನ ಕೊಡಿ ಎಂದು ಕೇಳಿದ್ದಾರೆ. ಮುಖ್ಯಮಂತ್ರಿ ನೆರೆ ಹಾವಳಿಯ ಜನರಿಗೆ ಹಣ ಬಿಡುಗಡೆ ಮಾಡಿ ಎಂದು ಹೇಳಿದ್ದಾರೆ. ಆದರೂ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ಶಾಸಕರೇ ಆರೋಪಿಸಿದ್ದಾರೆ. ಇದು ಸದ್ಯದ ಬಿಜೆಪಿ ಸರ್ಕಾರದ ಸ್ಥಿತಿ ಎಂದು ಟೀಕಾಪ್ರಹಾರ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap