ಹಿರಿಯೂರು :
ಮತದಾರರು ಆಸೆ-ಆಮಿಷಗಳಿಗೆ ಬಲಿಯಾಗಿ, ತಮ್ಮ ಮತವನ್ನು ಹಣ, ಬಟ್ಟೆ, ಹೆಂಡಕ್ಕೆ ಮಾರಿಕೊಂಡರೆ ನಾವು ಆಯ್ಕೆ ಮಾಡುವ ಜನಪ್ರತಿನಿಧಿಯನ್ನು ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಎಚ್. ಮಹಂತೇಶ್ ಎಚ್ಚರಿಸಿದರು.
ನಗರಸಭೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ನಗರ ಊರುಗಳಿಗೆ ಬೇಕಿರುವ ರಸ್ತೆ, ಚರಂಡಿ, ನೀರಾವರಿ ವ್ಯವಸ್ಥೆ ಶಾಲೆ-ಕಾಲೇಜು, ಸಂಚಾರವ್ಯವಸ್ಥೆಬೇಕು ಎಂದು ಕೇಳುವವರು ಪ್ರಾಮಾಣಿಕರಾಗಿದ್ದಲ್ಲಿ ಮಾತ್ರ ಅವರ ಬೇಡಿಕೆಗಳಿಗೆ ಬೆಲೆ ಇರುತ್ತದೆ. ಹಣ ಪಡೆದು ಮತ ಹಾಕಿದವರಿಗೆ ಇಂತಹ ಬೇಡಿಕೆಗಳನ್ನು ಮಂಡಿಸಲು ನೈತಿಕತೆ ಇರುವುದೇ ಇಲ್ಲ ಎಂದು ಅವರು ವಿವರಿಸಿದರು.
ನಗರಸಭೆ ಕಚೇರಿ ವ್ಯವಸ್ಥಾಪಕಿ ಲೀಲಾವತಿ ಮಾತನಾಡಿ, ಮತದಾರರು ಓಟು ಚಲಾಯಿಸುವಾಗ ಪ್ರಬುದ್ಧತೆ ಮೆರೆಯಬೇಕು. ನಮ್ಮ ಜನರಿಗೆ ಸ್ಪಂದಿಸುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಮತದಾನದ ಮೂಲಕ ನೀಡಲಾಗಿದೆ. ಮತಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಎಲ್ಲರೂ ತಪ್ಪದೇ ಮತಗಟ್ಟೆಗೆ ಹೋಗಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ರಮೇಶ್, ಕರುಣಾ, ನಯನ ಹಾಗೂ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
