ಹಗರಿಬೊಮ್ಮನಹಳ್ಳಿ
ತಾಲೂಕಿನ ಕೆಲವೆಡೆ ಸೋಮವಾರ ರಾತ್ರಿ ಬೀಸಿದ ಭಾರಿ ಗಾಳಿ ಮತ್ತು ಸುರಿದ ಮಳೆಗೆ ಮನೆಗಳು ಜಖಂಗೊಂಡು, ನಾಲ್ಕಾರು ಜನರಿಗೆ ಗಾಯಗಳಾಗಿ, ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೆ ಬಾಚಿಗೊಂಡನಹಳ್ಳಿ ಭಾಗದಲ್ಲಿ ಕೈಗೆ ಬಂದ ರೈತರ ಬೆಳೆಗಳಾದ ಮಾವು, ಬಾಳೆ ಹಾಗೂ ದಾಳಿಂಬೆ ಗಿಡಗಳು ನೆಲಕ್ಕುರುಳಿ ಅಪಾರ ನಷ್ಟವಾಗಿದ್ದು ರೈತರು ಸಂಕಷ್ಟಕ್ಕೆ ಬಿದ್ದಿದ್ದಾರೆ.
ಬ್ಯಾಲಾಳ್‍ಗ್ರಾಮದಲ್ಲಿ :
ತಾಲೂಕಿನ ಬ್ಯಾಲಾಳು ಗ್ರಾಮದಲ್ಲಿ ಕರವೇ ಸದಸ್ಯ ವಿಶ್ವನಾಥ ಸ್ವಾಮಿಗೆ ಸೇರಿದ ನೂರ ಇಪ್ಪತ್ತು ಸೀಟ್‍ಗಳಿಂದ ನಿರ್ಮಾಣಗೊಂಡಿದ್ದ ಹಾಲಿನ ಫಾರಂಹೌಸ್‍ನ ಮೇಲ್ಛಾವಣೆ ಸಂಪೂರ್ಣ ಹಾರಿಹೋಗಿ 1ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ. ಅಲ್ಲದೆ ಇದೇ ಗ್ರಾಮದ ಹೊಸಪ್ಲಾಟಿನಲ್ಲಿರುವ ಮರಿಯಮ್ಮನಹಳ್ಳಿ ಗುತ್ತೆಮ್ಮ ಎನ್ನುವವರ ಮನೆ ಮೇಚ್ಛಾವಣೆ ಹಾರಿದೆ, ನೆಲ್ಕುದ್ರಿ ಹನುಮವ್ವರ ಮನೆಸೀಟುಗಳು ಕುಸಿದಿರುವ ಪರಿಣಾಮ ಹನುಮವ್ವ ಸೇರಿ ಮಕ್ಕಳಾದ ಗೀತಾ, ರೇಖಾ ಹಾಗೂ ಬಾಲಕ ಹರ್ಷ ಎನ್ನುವವರಿಗೆ ತಲೆ ಕೈಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲ್ಲದೆ, ಇದೇ ಏರಿಯಾದ ಗೋಣೆಪ್ಪನ ಮನೆ ಕುಸಿದು 13ವರ್ಷದ ಬಾಲಕ ಮಹಾಂತೇಶನ ಕೈಗೆ ಬಲವಾದ ಗಾಯವಾಗಿ ಹೊಸಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಷ್ಟೇ ಅಲ್ಲದೆ ಇನ್ನೂ ನಾಲ್ಕಾರು ಮನೆಗಳು ಜಖಂಗೊಂಡಿವೆ.
ಕಡಲಬಾಳು ಗ್ರಾಮದಲ್ಲಿ ಪ್ರಾಣಾಪಯದಿಂದ ಯುವಕರು ಪಾರು:
ಕಡಲಬಾಳು ಗ್ರಾಮದಲ್ಲಿ ಈ ಮಳೆ ಗಾಳಿಯಿಂದ ಆದ ಅನಾಹುತದಲ್ಲಿ ಚಾಂದ್‍ಸಾಬ್ ಎನ್ನುವವರ ಮನೆಮೇಲೆ ಬೃಹತ್ ಬೇವಿನ ಮರ ಕುಸಿದು ಮನೆ ಸಂಪೂರ್ಣ ಕುಸಿದು ಆ ಮನೆಯಲ್ಲಿ ಕಾರ್ಯಕ್ರಮವೂಂದಕ್ಕೆ ಆಗಮಿಸಿದ್ದವರಲ್ಲಿ ಒಂದೇಕಡೆ ಸೇರಿದ್ದ 7ಜನ ಯುವಕರು ಪ್ರಾಣಾಪಯದಿಂದ ಪಾರಾದ ಘಟನೆ ಜರುಗಿದೆ. ಇದೇ ಗ್ರಾಮದ ಕಾತ್ರಿಕಿ ರಾಮಣ್ಣ, ರಸೂಲ್ ಸಾಬ್, ಹನುಮಂತಪ್ಪ, ಪಕ್ಕೀರಪ್ಪ, ಮಡಿವಾಳರ ನಾಗರಾಜ, ಎ.ಕೆ.ಕಾಲೂನಿ, ಹೊಸಪ್ಲಾಟ್‍ಗಳ ಮನೆಗಳು ಸೇರಿದಂತೆ ಹತ್ತಾರು ಮನೆಗಳು ಜಖಂಗೊಂಡಿವೆ. ಸುಣಗಾರ ಪಕ್ಕೀರಪ್ಪನವರ ಪಂಪ್‍ಸೆಟ್‍ನ ಬೋರ್ಡ್ ಮತ್ತು ಸ್ಟಾರ್ಟ್‍ಗಳು ಕೂಡ ಜಖಂಗೊಂಡಿವೆ.
ಬಾಚಿಗೊಂಡನಹಳ್ಳಿಯಲ್ಲಿ ಎಲೆತೋಟ, ಬಾಳೆ,ಮಾವು, ದಾಳಿಂಬೆ ಅಪಾರನಷ್ಟ :
ಬಾಚಿಗೊಂಡನಹಳ್ಳಿ ಏರಿಯಾದಲ್ಲಿನ ಗಾಯತ್ರಿ ದೇಗುಲಕ್ಕೆ ಹತ್ತರಿದಲ್ಲಿರುವ ಜೋಗಿರಾಮ್ ಎನ್ನುವವರಿಗೆ ಸೇರಿದ 5ಎಕರೆಯಲ್ಲಿ 6ಸಾವಿರ ಬಾಳೆಗಿಡಗಳಿದ್ದು ಇನ್ನು ಅದಿನೈದು ದಿನದಲ್ಲಿಯೇ ಕೈಗೆ ಬಂರುತ್ತಿದ್ದ ಬಾಳೆಗೊನೆಗಳ ಸಮೇತವಾಗಿ ಗಿಡಗಳು ಸಂಪೂರ್ಣ ನೆಲಕ್ಕುರುಳಿ 120ಕ್ಕೂ ಹೆಚ್ಚು ಟನ್‍ಗಳಷ್ಟು ಬಾಳೆ ನಷ್ಟವಾಗಿದ್ದು, ಇದರೊಂದಿಗೆ ಇದೇ ರೈತರಿಗೆ ಸೇರಿದ 7ಎಕರೆಯಲ್ಲಿ ಸೊಂಪಾಗಿ ಬೆಳೆದಿದ್ದ ಮಾವು ಕಟಾವುಗೆ ಬಂದಿದ್ದು, ಬಿರುಗಾಳಿಯಿಂದ ನೆಲಕ್ಕೆ ಉದುರಿವೆ.
ಅಂದಾಜು ಒಂದುವರೆ ಟನ್ ನಷ್ಟು ನಷ್ಟವಾಗಿದೆ ಎಂದು ಜೋಗಿರಾಮ್ ಹೇಳುತ್ತಾರೆ. ಇದೇ ತೋಟಕ್ಕೆ ಹತ್ತಿರದಲ್ಲಿರುವ ಪಿತಾಂಬ್ರಪ್ಪ ಎನ್ನುವ ರೈತರಿಗೆ ಸೇರಿದ 7ಎಕರೆ ದಾಳಿಂಬೆಯಲ್ಲಿ ಇಗಾಗಲೇ ಮಾರುಕಟ್ಟೆಗೆ ಹೋಗಬೇಕಿದ್ದ ಹಣ್ಣು ಬಿರುಗಾಳಿ ಮಳೆಗೆ ನೆಲಕ್ಕೆ ಬಿದ್ದು ರೈತನನ್ನು ಸಂಕಷ್ಟಕ್ಕೆ ದೂಡಿದೆ. ಗೊಂಡಬಾಳು ನಾಗರಾಜ್‍ನ 4ಎಕರೆ ಹಾಗೂ ಸಾಯಿರಾಮ್‍ರಿಗೆ ಸೇರಿದ 13 ಎಕರೆ ದಾಳಿಂಬೆ ಗಿಡಸಮೇತವಾಗಿ ಬುಡಮೇಲಾಗಿ ನೆಲಕಚ್ಚಿವೆ.
ಇದೇ ರೈತ ಪಿತಾಂಬ್ರಪ್ಪನ ಎರಡು ಎಕರೆ ಎಲೆತೋಟ, ಎಲಿಗಾರ್ ವೀರಭದ್ರಪ್ಪ, ಹೊಸ್ಕೇರಿ ವಿಶ್ವನಾಥ, ಮಹೇಶಪ್ಪ, ಟಿ.ಚನ್ನಪ್ಪ, ಗಡ್ಡಿದೊಡ್ಡಬಸಪ್ಪ, ಗಡ್ಡಿಚನ್ನಪ್ಪ, ಕೊಟ್ರೇಶ್, ಹನುಮಂತಪ್ಪ ಸೇರಿದಂತೆ ಹಲವರ ತಲಾ ಒಂದು, ಎರಡು ಎಕರೆಯಷ್ಟು ಎಲೆತೋಟಗಳು ನೆಲಕಚ್ಚಿವೆ. ಹೀಗೆ ರೈತರ ಹೊಲ, ತೋಟಗಳಲ್ಲಿ ಕೈಗೆ ಬಂದ ಬೆಳೆ ಭಾರಿ ಗಾಳಿ ಮಳೆಗೆ ಅಪಾರ ನಷ್ಟವಾಗಿದ್ದು ರೈತರನ್ನು ಸಂಕಷ್ಟಕ್ಕೇಡು ಮಾಡಿದೆ. ಈ ಬಗ್ಗೆ ಕಂದಾಯ ಇಲಾಖೆಯಿಂದ ಗ್ರಾಮಲೆಕ್ಕಾಧಿಕಾರಿಗಳು, ಗ್ರಾ.ಪಂ.ಪಿಡಿಒ, ಕಾರ್ಯದರ್ಶಿಗಳು ಭೇಟಿನೀಡಿ ನಷ್ಟವಾಗಿರುವ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಇಷ್ಟೇ ಅಲ್ಲದೆ, ಬ್ಯಾಲಾಳು ಮತ್ತು ಕಡಲಬಾಳು ಗ್ರಾಮಗಳಲ್ಲಿ ಸೇರಿ ತಾಲೂಕಿನಾಧ್ಯಂತ 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ, ಡಿಶ್ ಕೇಬಲ್ ಕಟ್ ಆಗಿದೆ, ಬಾಚಿಗೊಂಡನಹಳ್ಳಿಯಲ್ಲಿ ಮತ್ತು ನಾರಾಯಣದೇವರ ಕೆರೆಯಲ್ಲಿನ ಗ್ರಾಮಗಳಲ್ಲಿ 65 ಕೆ.ವಿ. ಸಾಮಥ್ರ್ಯಉಳ್ಳ ಟಿ.ಸಿ.ಗಳು ಸುಟ್ಟಿವೆ. ಹರೆಗೊಂಡನಹಳ್ಳಿ ಮನೆಯೊಂದರ ಸೋಲರ್‍ಗೆ ಸಿಡಿಲುಬಡಿದ ಪರಿಣಾಮ ಮನೆಯಲ್ಲಿನ ವಿದ್ಯುತ್ ಬಲ್ಬಗಳು ಸಿಡಿದು ಮನೆಯಲ್ಲಿದ್ದ ತಾಯಿ ಹಾಗೂ ಮಗಳಿಗೆ ಸಣ್ಣುಪಟ್ಟ ಗಾಯಗಳಾಗಿರುವ ಘಟನೆ ಜರುಗಿದೆ.
ವಿದ್ಯುತ್ ಹರಿದು ವ್ಯಕ್ತಿಸಾವು :
ಸ್ನಾನಮಾಡಲು ತೆರಳಿದ್ದ ವ್ಯಕ್ತಿಗೆ ವಿದ್ಯುತ್ ಹರಿದು ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ. ತಾಲೂಕಿನ ಕತ್ಯಾಯಿನಿಮರಡಿ ಬಳಿ ಸರ್ಕಾರಿ ಹಾಸ್ಟಲ್ ನಿರ್ಮಾಣವಾಗುತ್ತಿದ್ದು, ಕಟ್ಟಡದ ಆವರಣದಲ್ಲಿ ನೀರಿನ ತೊಟ್ಟಿ ನಿರ್ಮಾಣಮಾಡಲಾಗಿದೆ. ಇಲ್ಲಿ ಹೊಳೆ ಮುತ್ಕೂರಿನ ನಿವಾಸಿ ಎಚ್.ಎಂ.ಕೊಟ್ರಯ್ಯ(60) ಎನ್ನುವ ವ್ಯಕ್ತಿ ಸ್ನಾನಕ್ಕೆ ಹೋಗಿದ್ದಾಗ, ಕಿಡಿಕಿಗೆ ಕಟ್ಟಲಾಗಿದ್ದ ಕಬ್ಬಿಣದ ತಂತಿಯಿಂದ ವಿದ್ಯುತ್ ಪ್ರಹಾರಗೊಂಡು, ಈ ವ್ಯಕ್ತಿಗೆ ತಗುಲಿದ ಪರಿಣಾಮ ಸಾವನ್ನಪ್ಪಿದ ಘಟನೆ ಜರುಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.