ಹಗರಿಬೊಮ್ಮನಹಳ್ಳಿ:
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆ ಸುಳ್ಳು ಭರವಸೆಗಳು, ಈ ಸುಳ್ಳು ಭರಸವೆಗಳನ್ನೇ ದೇಶದ ಅಭಿವೃದ್ಧಿ ಯೋಜನೆಗಳೆಂದು ಬಿಂಬಿಸುತ್ತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಪರ ಮತಯಾಚಿಸಬೇಕಾಗಿದೆ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಆರೋಪಿಸಿದರು.
ಅವರು ತಾಲೂಕಿನ ಹಂಪಾಪಟ್ಟಣದಲ್ಲಿ ನಡೆದ ಬಳ್ಳಾರಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರ ಮತಯಾಚಿಸಿ ಮಾತನಾಡಿದರು. ಮೋದಿಯವರ ಕಾರ್ಯಕ್ರಮಗಳು ಬಡವರ ಪರವಾಗಿ ಇಲ್ಲ. ಬರೀ ಭಾಷಣಗಾರ ಸಾಮಾನ್ಯ ಜನರ ಪರವಾದ ಯೋಜನೆಗಳು ಇಲ್ಲ ಎಂದು ದೂರಿದರು.
ರಾಜ್ಯದಲ್ಲಿ ರೈತರಿಗೆ ಬೆಳೆ ಪರಿಹಾರ, ಅನ್ನಭಾಗ್ಯ, ಸಾಲಮನ್ನಾದಂತ ಅನೇಕ ಯೋಜನೆಗಳು ಜಾರಿಗೆ ತರುವಲ್ಲಿ ಯಶಸ್ವಿಯಾಗಿ ಸಮ್ಮಿಶ್ರ ಸರ್ಕಾರ ಈಗಾಗಲೇ ಜನಮನದಲ್ಲಿ ನೆಲೆಯೂರಿದೆ ಎಂದು ತಿಳಿಸಿದ ಅವರು ಬಳ್ಳಾರಿಯಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಇದರಿಂದ ಜಿಲ್ಲೆಗೊಬ್ಬ ಉತ್ತಮ ಲೋಕಸಭಾ ಸದಸ್ಯ ಸಿಗುತ್ತಾರೆ ಎಂದು ತಿಳಿಸಿದರು.
ಶಾಸಕ ಎಸ್.ಭೀಮಾನಾಯ್ಕ್ ಮಾತನಾಡಿ, ರಾಜ್ಯದಲ್ಲಿ 5ವರ್ಷ ಆಡಳಿತ ನೀಡಿದ ಕಾಂಗ್ರೆಸ್ ಸರ್ಕಾರ, ಸಾರ್ವಜನಿಕರ ಮನೆಬಾಗಿಲಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದು, ಕೃಷಿಯಲ್ಲಿ ರೈತರಿಗೆ ಸಾಕಷ್ಟು ರಿಯಾಯಿತಿ ಸೌಲಭ್ಯಗಳನ್ನು ನೀಡಿದೆ ಎಂದರು. ಕ್ಷೇತ್ರದಲ್ಲಿ ಬಿಜೆಪಿ ಆಡಳಿತ ಇದ್ದಾಗ ನಾನು ತಂದ ಯೋಜನೆಗಳು ಇಂದಿಗೂ ನೆರವೇರಿಸಲು ಆಗುತ್ತಿಲ್ಲವೆಂದು ಮಾಜಿ ಶಾಸಕ ಹೇಳಿಕೊಳ್ಳುತಿದ್ದಾರೆ. ಆಗಾದರೆ, ನೀರಾವರಿ ಸೌಲಭ್ಯಗಳನ್ನು ಜಾರಿಗೆ ತಂದವರು ಯಾರು ಎಂದು ಸಾರ್ವಜನಿಕವಾಗಿ ಪ್ರಶ್ನಿಸಿದರು. ಇನ್ನು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಮಾತನಾಡುವಂತ ವ್ಯಕ್ತಿ ಉಗ್ರಪ್ಪ ಆಗಲಿದ್ದಾರೆ. ಆದ್ದರಿಂದ ಅವರನ್ನು ಆಯ್ಕೆಮಾಡುವ ಹೊಣೆ ನಿಮ್ಮದಾಗಲೆಂದರು.
ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ದೃಷ್ಠಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕಿತ್ತು. ಬಿಜೆಪಿಯಿಂದ ಜಿಲ್ಲೆ ಅಭಿವೃದ್ಧಿಗಿಂತ ಕುಂಟಿತವೇ ಹೆಚ್ಚು. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಲೋಕಸಭಾ ಉಪ ಚುನಾವಣೆಯಲ್ಲಿ ಉಗ್ರಪ್ಪನವರನ್ನು ಗೆಲ್ಲಿಸುವ ಮೂಲಕ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.
ಜಿ.ಪಂ.ಮಾಜಿ ಸದಸ್ಯ ಭೀಮಪ್ಪ ಮಾತನಾಡಿ, ಶ್ರೀರಾಮುಲು ಅವರಿಗೆ ಪದೇಪದೇ ಚುನಾವಣೆಗಳು ಅನಿವಾರ್ಯನಾ? ಅವರು ಕೂಡ ಬಿಜೆಪಿಯಿಂದ ಬೇಸತ್ತು ಕಾಂಗ್ರೆಸ್‍ಗೆ ಆಗಮಿಸುವ ದಿನಗಳು ದೂರವಿಲ್ಲ ಎಂದರು.ತಾಲೂಕಿನ ಮರಬ್ಬಿಹಾಳ್, ಬೆಣಕಲ್ಲು, ಮಾಲವಿ, ಉಲವತ್ತಿ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡರು.
ಕೆ.ಪಿ.ಸಿ.ಸಿ.ಕಾರ್ಯದರ್ಶಿ ಸುಶೀಲ್ ಕುಮಾರ್, ಬ್ಲಾಕ್ ಅಧ್ಯಕ್ಷ ಸೋಮಲಿಂಗಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಬನ್ನಿಗೋಳ ವೆಂಕಣ್ಣ, ಮುಖಂಡರಾದ ಕುರಿಶಿವಮೂರ್ತಿ, ವಕೀಲ ಬಿ.ವಿ.ಶಿವಯೋಗಿ, ಅಕ್ಕಿತೋಟೇಶ್, ಹುಡೇದ್ ಗುರುಬಸವರಾಜ್, ಕನ್ನಿಹಳ್ಳಿ ಚಂದ್ರು, ದೇವೆಂದ್ರ, ಡಿಶ್ ಮಂಜುನಾಥ, ಗದ್ಲಿಕಟ್ಟಿ ತಿಮ್ಮಣ್ಣ. ಮಲ್ಲಿಕಾರ್ಜುನ, ಹಾಲಪ್ಪ, ನಾಗರಾಜ್, ಬಂಟರ್ ಕುಬೇರ, ಸೋಮನಾಥ್, ಮಂಜುನಾಥ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








