ಚಿಕ್ಕನಾಯಕನಹಳ್ಳಿ
ಅಧಿಕಾರಿಗಾಗಿ ದಿನವಿಡಿ ಜಿ.ಪಂ.ಸದಸ್ಯರು ಕಾದರು, ಕಚೇರಿಯಲ್ಲಿಯೂ ಇರಲಿಲ್ಲ, ಮೊಬೈಲ್ ಕರೆ ಮಾಡಿದರೆ ಸಭೆಯಲ್ಲಿದ್ದೇನೆ ಎಂಬ ಉತ್ತರ. ಕಚೇರಿಗೆ ಬಂದದ್ದು ಮಾತ್ರ ಸಂಜೆ 5ಕ್ಕೆ, ಕಚೇರಿಗೆ ಬರಲು ತಡವಾಗಿದ್ದ ಕಾರಣವೂ ನೀಡಲಿಲ್ಲ. ಸದಸ್ಯರ ಸಮಸ್ಯೆಗೆ ಉತ್ತರವೂ ದೊರಕಲಿಲ್ಲ. ಈ ಪ್ರಸಂಗ ನಡೆದಿದ್ದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ರುಕ್ಕಣ್ಣನವರ ಕಚೇರಿಯಲ್ಲಿ.
ತಾಲ್ಲೂಕಿನ ವಿವಿಧ ಜಿ.ಪಂ.ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜಿ.ಪಂ.ಸದಸ್ಯರು ಪಟ್ಟಣದಲ್ಲಿರುವ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಚೇರಿಗೆ ಬೆಳಗ್ಗೆ 11ಗಂಟೆಗೆ ಆಗಮಿಸಿದರೂ, ಅಧಿಕಾರಿ ಸಿಗಲಿಲ್ಲ. ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಸಭೆಯಲ್ಲಿದ್ದೇನೆ, 10ನಿಮಿಷಗಳ ನಂತರ ಬರುತ್ತೇನೆಂದು ದೂರವಾಣಿಯಲ್ಲಿ ತಿಳಿಸಿದ ಬಗ್ಗೆ ಜಿ.ಪಂ.ಸದಸ್ಯ ರಾಮಚಂದ್ರಯ್ಯ ಹೇಳಿದರು. ಆದರೆ ಸಂಜೆ 4.30 ಗಂಟೆಯಾದರೂ ಬರದೆ ಇದ್ದರಿಂದ ಕಾದೂ ಕಾದೂ ಸುಸ್ತಾಗಿ ಪತ್ರಿಕೆಯ ಮುಂದೆ ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಹೇಳಿದರು.
ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ತೊಂದರೆ ಇರುವ ಗ್ರಾಮಗಳಿಗೆ ಹಣ ಬಿಡುಗಡೆ ಮಾಡಿ ಮಂಜೂರಾತಿ ನೀಡಿದ್ದರೂ ಅಧಿಕಾರಿಗಳು ಮಾತ್ರ ಸರಿಯಾಗಿ ಕೊಳವೆ ಬಾವಿಗಳನ್ನು ಕೊರೆಸದೆ ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ ಎಂದು ದೂರಿದ ಅವರು, ಎಂಜಿನಿಯರ್‍ಗಳು ತಾವೇ ಬೇರೆಯವರಿಗೆ ಗುತ್ತಿಗೆ ನೀಡುತ್ತಿದ್ದಾರೆ. ಜಿ.ಪಂ.ಸದಸ್ಯರು ಹಳ್ಳಿಗಳಿಗೆ ಕೊಳವೆ ಬಾವಿಗಳನ್ನು ಮಂಜೂರು ಮಾಡಿಸಿಕೊಂಡು ಬಂದರೆ ನಮ್ಮ ಗಮನಕ್ಕೆ ಬರದೆ ಹಾಗೂ ಟೆಂಡರ್ ಕರೆಯದೆ ಎಂಜಿನಿಯರ್‍ಗಳೇ ಕಾಮಗಾರಿಗಳನ್ನು ಬೇರೆಯವರ ಹೆಸರಿನಲ್ಲಿ ಕಾಮಗಾರಿ ಕೈಗೊಳ್ಳುತ್ತಿದ್ದಾರೆ ಹಾಗೂ ಪೈಪ್‍ಲೈನ್‍ಗಳನ್ನು ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ ಎಂದು ರಾಮಚಂದ್ರಯ್ಯ ಆರೋಪಿಸಿದರು.
ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ ಮಾತನಾಡಿ, ಹುಳಿಯಾರಿನ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಕಿ.ಮೀ. ನಡೆಯುತ್ತಾರೆ. ಸಮಸ್ಯೆ ಬಗ್ಗೆ ತಿಳಿಸಲು ಬಂದರೆ ಅಧಿಕಾರಿಗಳು ಸಂಪರ್ಕಕ್ಕೆ ಸಿಗುವುದಿಲ್ಲ. ಸಿಂಗಾಪುರದ ಕಾರ್ಯಕ್ರಮಕ್ಕೆ ಹೋದಾಗ ರಾತ್ರಿ 10.30ರ ವೇಳೆ ಹೆಣ್ಣು ಮಕ್ಕಳು ನೀರಿಗಾಗಿ ಪರದಾಡುತ್ತಿದ್ದಾರೆ. ಈ ಬಗ್ಗೆ ಹೇಳಿದರೂ ಇದೂವರೆವಿಗೂ ಅಧಿಕಾರಿ ಯಾವ ಕ್ರಮವೂ ಕೈಗೊಂಡಿಲ್ಲ ಎಂದು ದೂರಿದರು.
ಜಿ.ಪಂ.ಸದಸ್ಯ ಮಹಲಿಂಗಪ್ಪ ಮಾತನಾಡಿ, ತಾಲ್ಲೂಕಿನ ಎಲ್ಲಾ ಹಳ್ಳಿಗಳಲ್ಲೂ ನೀರಿನ ಸಮಸ್ಯೆ ಹೆಚ್ಚಾಗಿದ್ದು ಸರ್ಕಾರ ಗ್ರಾಂಟ್ ಬಿಡುಗಡೆ ಮಾಡಿದ್ದರೂ ಅಗ್ರಿಮೆಂಟ್ ಮಾಡಿಕೊಳ್ಳದೆ ಎಂಜಿನಿಯರ್‍ಗಳು ಕೆಲಸ ಮಾಡುತ್ತಿಲ್ಲ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ನೀರಿನ ಹಾಹಾಕಾರ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
ಜಿ.ಪಂ.ಸದಸ್ಯ ಕಲ್ಲೇಶ್ ಮಾತನಾಡಿ, ತಮ್ಮ ಕ್ಷೇತ್ರ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೆ ಪ್ರತಿ ಬಾರಿಯೂ ಸಭೆಯಲ್ಲಿದ್ದೇನೆ ಎಂದೇ ಉತ್ತರ ನೀಡುತ್ತಾರೆ. ಈ ಬಗ್ಗೆ ವಿಚಾರಿಸಿದರೆ ಅಂದು ಯಾವ ಸಭೆಯೂ ನಡೆಯುತ್ತಿರುವುದಿಲ್ಲ ಎಂಬ ವಿಷಯ ತಿಳಿಯಿತು. ಇಲಾಖೆಯ ಎಂಜಿನಿಯರ್ ಕಿರಣ್ ಎಂಬುವವರು ಅವರೇ ಬೇರೆಯವರಿಂದ ಗುತ್ತಿಗೆ ಮಾಡಿಸಿಕೊಂಡು ಕೆಲಸ ಮಾಡಿಸುತ್ತಿದ್ದಾರೆ. ನಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೆಲಸಗಳ ಬಗ್ಗೆ ನಮ್ಮ ಗಮನಕ್ಕೆ ಬರುತ್ತಿಲ್ಲ ಎಂದು ದೂರಿದ ಅವರು, ಯಾವ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬ ಬಗ್ಗೆ ಜನಪ್ರತಿನಿಧಿಗಳಿಗೆ ತಿಳಿದಿರುತ್ತದೆ. ಈ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಸಂಪರ್ಕಿಸಬೇಕು ಎಂದರು.
ತಾ.ಪಂ.ಸದಸ್ಯೆ ಚೇತನಗಂಗಾಧರ್ ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ ನೀರಿಗಾಗಿಯೇ ಹೊಡೆದಾಟ, ದೌರ್ಜನ್ಯಗಳು ನಡೆಯುತ್ತಿವೆ. ಬಂಗಾರಗೆರೆ ಹಳ್ಳಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ತಿಳಿಸಿದರೂ ಯಾವ ಕ್ರಮವೂ ಕೈಗೊಂಡಿಲ್ಲ. ಜನರಿಂದ ಆಯ್ಕೆಯಾದ ಪ್ರತಿಯೊಬ್ಬರೂ ಜನಪ್ರತಿನಿಧಿಗಳೆ. ಅವರೂ ಸಾರ್ವಜನಿಕರ ಸಮಸ್ಯೆಗಾಗಿಯೇ ಮಾತನಾಡುವುದು, ಅಧಿಕಾರಿಗಳು ಸ್ಪಂದಿಸಿ ಎಂದು ಹೇಳಿದರು.
