ಚಿತ್ರದುರ್ಗ
ಕರ್ನಾಟಕ ಸುಗಮ ಸಂಗೀತ ಕ್ಷೇತ್ರಕ್ಕೆ ಒಂದು ಪ್ರತ್ಯೇಕ ಅಕಾಡೆಮಿ ಸ್ಥಾಪನೆ ಆಗಬೇಕೆಂದು ಹಿರಿಯ ಕವಿ ಬಿ.ಆರ್.ಲಕ್ಷ್ಮಣ್ ರಾವ್ ಒತ್ತಾಯಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ನಗರದ ಮುರುಘಾಮಠದ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ 16ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲಾ ಪ್ರಕಾರದ ಸಂಗೀತಕ್ಕೂ ತನ್ನದೇ ಆದ ವೈಶಿಷ್ಟ್ಯ ಇದೆ. ಆದರೆ ಸುಗಮ ಸಂಗೀತಕ್ಕೆ ಖಚಿತವಾದ ಹೆಸರಿಲ್ಲ. ಹಾಗಾಗಿ ಸುಗಮ ಸಂಗೀತ ತನ್ನನ್ನು ತಾನು ವ್ಯಾಖ್ಯಾನಿಸಿ ಕೊಳ್ಳುವ ಅಗತ್ಯವಿದೆ ಎಂದರು.
ಸುಗಮ ಸಂಗೀತ ಎಂದರೆ ಏನು, ಅದರ ವೈಶಿಷ್ಟ್ಯ ಏನು. ಸುಗಮ ಸಂಗೀತ ಕವಿಗೀತೆಗಳ ಗಾಯನವೊ, ವಚನಗೀತೆಗಳ ಗಾಯನವೊ, ಜಾನಪದ, ಭಕ್ತಿ ಗೀತೆಗಳ ಗಾಯನವೊ, ಶಾಸ್ತ್ರೀಯ ಸಂಗೀತವೊ, ಈ ಎಲ್ಲವನ್ನೂ ಒಳಗೊಂಡಂತೆ ತನ್ನನ್ನು ತಾನು ಪರಿಭಾಷಿಸಿಕೊಳ್ಳಬೇಕಿದೆ. ಅದಕ್ಕಾಗಿ ಪ್ರತ್ಯೇಕ ಸುಗಮ ಸಂಗೀತ ಅಕಾಡೆಮಿ ಆಗಬೇಕಿದ್ದು ಈ ಸಮ್ಮೇಳನದ ಮೂಲಕ ಹಕ್ಕೋತ್ತಾಯ ಮಾಡುತ್ತೇನೆ ಎಂದು ಹೇಳಿದರು.
ಸುಗಮ ಸಂಗೀತ ಕ್ಷೇತ್ರವು ನಾನಾ ಸವಾಲುಗಳನ್ನು ಎದುರಿಸುತ್ತಿದೆ. ಆದರೆ ಭವಿಷ್ಯದಲ್ಲಿ ಆ ಎಲ್ಲಾ ಸವಾಲುಗಳನ್ನು ಎದರಿಸುವ ಭರವಸೆ, ವಿಶ್ವಾಸ ಇದೆ. ಅಕಾಡೆಮಿ ಪದಾಧಿಕಾರಿಗಳು, ನಾವೆಲ್ಲರೂ ಸೇರಿ ಈ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸೋಣ. ಸಮಕಾಲಿನ ಸವಾಲುಗಳನ್ನು ಎದುರಿಸಿ ಅರ್ಥಪೂರ್ಣವಾಗಿ ಮುಂದೆ ಬರುವಂತೆ ಶ್ರಮಿಸೋಣ ಎಂದರು.
ಸುಗಮ ಸಂಗೀತ ಸಮ್ಮೇಳನದಲ್ಲಿ ಪ್ರತಿ ವರ್ಷ ಹೊಸ ಹೊಸ ಗಾಯಕರು ಬರುತ್ತಿದ್ದಾರೆ. ಅವರಿಗೆ ಶಿಬಿರ ಆಯೋಜಿಸುವ ಮೂಲಕ ತರಬೇತಿ ನೀಡಲಾಗುತ್ತದೆ. ಅದೇ ರೀತಿ ಹೊಸ ಕವಿಗಳನ್ನೂ ಆಹ್ವಾನಿಸಿ ಅವರಿಗೂ ಶಿಬಿರ ಆಯೋಜಿಸುವ ಮೂಲಕ ಕವಿತೆ, ಭಾವಗೀತೆ ರಚನೆ ಮಾಡುವ ತರಬೇತಿ ನಡೆಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ಭಾವಗೀತೆಯ ಲೋಕಕ್ಕೆ ಒಂದು ಹೊಸ ಆಯಾಮ ತಂದುಕೊಟ್ಟವರು ಕವಿ ನಿಸಾರ್ ಅಹ್ಮದ್ ಮತ್ತು ಮೈಸೂರು ಅನಂತಸ್ವಾಮಿ ಅವರು. ನಾನು ಕಾವ್ಯ ಕ್ಷೇತ್ರಕ್ಕೆ ಬರಲು ನಿಸಾರ್ ಅಹ್ಮದ್, ಸುಗಮ ಸಂಗೀತ ಕ್ಷೇತ್ರಕ್ಕೆ ಬರಲು ಸಿ.ಅಶ್ವಥ್, ರತ್ನಮಾಲ, ಮಾಲತಿ ಶರ್ಮ ಕಾರಣರು. ಈವರೆಗೆ ನಡೆದ ಸುಗಮ ಸಂಗೀತ ಸಮ್ಮೇಳನದ ಎಲ್ಲಾ 16 ಕಾರ್ಯಕ್ರಮಗಳಲ್ಲೂ ಭಾಗವಹಿಸಿದ ಏಕೈಕ ಕವಿ ಎಂದರೆ ನಾನು ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಶಸ್ತಿ ಪ್ರದಾನ : ಹಿರಿಯ ಕವಿ ಡಾ.ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಕಾವ್ಯಶ್ರೀ ಹಾಗೂ ಸಂತ ಶಿಶುನಾಳ ಶರೀಫ್ ಪ್ರಶಸ್ತಿ ಪುರಸ್ಕತ ಗರ್ತಿಕೆರೆ ರಾಘಣ್ಣ ಅವರಿಗೆ ಭಾವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕವಿ ಡಾ.ಕೆ.ಎಸ್.ನಿಸಾರ್ ಅಹಮದ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಸುಗಮ ಸಂಗೀತ ಕ್ಷೇತ್ರಕ್ಕೆ ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್ ಅಂತಹವರ ಕೊಡುಗೆ ಅಪಾರ. ಮೈಸೂರು ಅನಂತಸ್ವಾಮಿ ಅವರು ನನ್ನ ಭಾವಗೀತೆಗಳಿಗೆ ಹೊಸ ಹೊಸ ಪ್ರಯೋಗ ಮಾಡಿ, ಹಾಡಿ, ನನ್ನನ್ನು ಮೇಲೆ ತಂದರು ಎಂದು ಸ್ಮರಿಸಿದರು.
ಡಾ.ಶಿವಮೂರ್ತಿ ಮುರುಘಾ ಶರಣರು ಸಾನಿಧ್ಯ ವಹಿಸಿದ್ದರು. ಹಿರಿಯ ಕವಿ ಡಾ.ದೊಡ್ಡರಂಗೇ ಗೌಡರು ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷೆ ಮಾಲತಿ ಶರ್ಮ, ಹಿರಿಯ ಕವಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ನಗರ ಶ್ರೀನಿವಾಸ ಉಡುಪ, ಗೌರವ ಕಾರ್ಯದರ್ಶಿ ಡಿ.ರವಿ, ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
