ಮುದ್ರಣ ಮಿತ್ರರಿಗೆ ಆರ್ಥಿಕ ಸಹಾಯಕ್ಕಾಗಿ ಸರ್ಕಾರಕ್ಕೆ ಮನವಿ

ತಿಪಟೂರು

     ಕಿಲ್ಲರ್ ಕೊರೊನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ಅನೇಕ ಉದ್ಯಮಗಳು ತಳ ಹಿಡಿದಿದ್ದರೂ ಲಾಕ್‍ಡೌನ್ ಸಡಿಲಿಕೆಯಿಂದ ಮತ್ತೆ ಮುನ್ನೆಲೆಗೆ ಬರುತ್ತಿವೆ. ಆದರೆ ನಮ್ಮ ಮುದ್ರಣಾಲಯಗಳು ಮಾತ್ರ ಇನ್ನು ಹಿಂದುಳಿಯುತ್ತಿದ್ದು, ಅಂಗಡಿ ಬಾಡಿಗೆ, ವಿದ್ಯುತ್ ಬಿಲ್, ಸಾಲದ ಕಂತನ್ನು ಕಟ್ಟಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ಆರ್ಥಿಕ ಸಹಾಯ ಮಾಡುವಂತೆ ಶಾಸಕ, ತಹಸೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳಿಗೆ ಅರ್ಜಿಸಲ್ಲಿಸಲಾಗಿದೆ.

    ತಾಲ್ಲೂಕಿನಲ್ಲಿ ಏಕೆ ಪ್ರಪಂಚದಲ್ಲಿಯೆ ಕೆಲವು ಉದ್ಯಮಗಳು ಕೊರೊನಾ ಮಹಾಮಾರಿಯಿಂದ ತಮ್ಮ ಅಳಿವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಈ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಮುದ್ರಣವನ್ನೇ ನಂಬಿಕೊಂಡು, ಎಲ್ಲಾ ಶುಭಕಾರ್ಯಗಳಾದ ಮದುವೆ, ಮುಂಜಿ, ಆರತಿ, ನಾಮಕರಣ, ಜಾತ್ರೆ, ಜೊತೆಗೆ ಸರ್ಕಾರಕ್ಕೆ ಬೇಕಾದ ಎಲ್ಲಾ ರೀತಿಯ ಪತ್ರಗಳು ಪುಸ್ತಕಗಳನ್ನು ಮುದ್ರಿಸಿಕೊಂಡು ಜೀವನ ಸಾಗಿಸುತ್ತಿದ್ದ ಮುದ್ರಕರು ಇಂದು ಬೀದಿಗೆ ಬೀಳುವ ಪರಿಸ್ಥಿತಿಗೆ ತಲುಪಿದ್ದು ಮನೆ, ಅಂಗಡಿ, ಬಾಡಿಗೆ ವಿದ್ಯುತ್ ಬಿಲ್ ಕಟ್ಟಲಾಗದೆ ತೀರ್ವ ಸಂಕಷ್ಟಕ್ಕೀಡಾಗಿದ್ದರೆ.

ಕೈ ಚೆಲ್ಲಿದ ವಸಂತಕಾಲ :

      ಸಾಮಾನ್ಯವಾಗಿ ಮುದ್ರಕರಿಗೆ ವಸಂತಕಾಲವೆಂದರೆ ಬಹಳ ಅಚ್ಚುಮೆಚ್ಚು. ಏಕೆಂದರೆ ವಸಂತಕಾಲ ಬಂದಾಗ ಮಾವುಚಿಗುರಲೇ ಬೇಕು, ಮಾವು ಚಿಗುರುವ ಸಮಯದಲ್ಲಿ ಶುಭಕಾರ್ಯಗಳಾಗುವುದು ಸಾಮಾನ್ಯ. ಈ ಬಾರಿಯು ಸಹ ವಸಂತಕಾಲಕ್ಕೆ ಕಾಯುವ ಕೋಗಿಲೆಯಂತೆ ಮುದ್ರಣ ಮಿತ್ರರು ಹೊಸಹೊಸ ವಿನ್ಯಾಸದ ಮದುವೆ ಲಗ್ನಪತ್ರಿಕೆ, ಆಹ್ವಾನ ಪತ್ರಿಕೆಗಳನ್ನು ಸಾಲ ಸೋಲ ಮಾಡಿಕೊಂಡು ದಾಸ್ತಾನು ಮಾಡಿದ್ದರು.

       ಆದರೆ ಕೊರೊನಾ ಮಹಾಮಾರಿಯಿಂದ ಮುದ್ರಕರ ಮೇಲೆ ಸೂತಕದ ಛಾಯೆ ಆವರಿಸಿದ್ದು, ಮುದ್ರಕರ ಜಂಘಾಬಲವನ್ನೇ ಅಡಗಿಸಿದೆ. ಈ ಸಂದರ್ಭದಲ್ಲಿ ನಾವು ಮಾಡಿರುವ ಸಾಲವನ್ನು ತೀರಿಸಬಹುದು, ಉತ್ತಮವಾದ ಪತ್ರಿಕೆಗಳನ್ನು ಹಾಕಿಸಿ ಜನರನ್ನು ಆಕರ್ಷಿಸಬಹುದು ಎಂದು ಕೊಂಡಿದ್ದವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತೆ ಕೊರೊನಾ ಮಾಡಿದೆ.

     ಈ ಕೊರೊನಾ ಮಹಾಮಾರಿಯು ಸರಿಯಾಗಿ ಹೆಚ್ಚು ಮದುವೆ ನಡೆಯುವ ವಸಂತಕಾಲದಲ್ಲಿಯೇ ಆಗಮಿಸಿದ್ದು ಈ ಕಾಲದಲ್ಲಿ ಹಲವಾರು ಜನರು ತಮ್ಮ ವ್ಯಾಪಾರವನ್ನು ವಿಸ್ತರಿಸುವ ಸಲುವಾಗಿ ವಿವಿಧ ರೀತಿಯ ಹ್ಯಾಂಡ್‍ಬಿಲ್ ಅಲ್ಲದೆ ಲಗ್ನಪತ್ರಿಕೆಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಆದರೆ ಈ ಲಾಕ್‍ಡೌನ್ ನಡುವೆ ಮದುವೆಗಳು ನಡೆದರೂ ಕೇವಲ 50 ಜನ ಸೇರಲು ಮಾತ್ರ ಅವಕಾಶ ಇರುವುದರಿಂದ ಯಾರೂ ಸಹ ಲಗ್ನಪತ್ರಿಕೆಗಳನ್ನು ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ.

      ಇನ್ನು ವ್ಯಾಪಾರಿಗಳು ವ್ಯಾಪಾರವಿಲ್ಲದೆ ಇರುವುದರಿಂದ ಬಿಲ್‍ಬುಕ್‍ಗಳನ್ನು ಮಾಡಿಸದಿರುವುದು ಸಹ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಿದ್ದು, ಮುದ್ರಣವನ್ನೇ ನಂಬಿಕೊಂಡವರು ಜೀವನ ಮುಳುಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮುದ್ರಣ ಮಿತ್ರರು ತಿಳಿಸಿದ್ದಾರೆ.ಇಷ್ಟೆಲ್ಲಾ ಕಷ್ಟದಲ್ಲಿರುವ ಮುದ್ರಣೋದ್ಯಮಿಗಳ ಕಷ್ಟಕ್ಕೆ ಸರ್ಕಾರ ಕೂಡಲೆ ಆಗಮಿಸಿ ಸೂಕ್ತ ನೆರವನ್ನು ಕೊಡಬೇಕೆಂದು ಉಪವಿಭಾಗಾಧಿಕಾರಿಗಳಿಗೆ ಮುಖಾಂತರ ಸರ್ಕಾರಕ್ಕೆ ತಮ್ಮ ಮನವಿಯನ್ನು ಸಲ್ಲಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap