ಹಾನಗಲ್ಲ :
ತಾಲೂಕಿನ ಉತ್ತರ ಭಾಗದ ನೂರೊಂದು ನೀರಾವರಿ ಕೆರೆ ತುಂಬಿಸುವ ಬಾಳಂಬೀಡ ಏತ ನೀರಾವರಿ ಯೋಜನೆ ಜಾರಿಗೊಳಿಸುವುದು ಹಾಗೂ ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿಯನ್ನು ನೂತನ ತಾಲೂಕನ್ನಾಗಿಸುವ ನಿರ್ಣಯವನ್ನು ಬೆಳಗಾವಿ ಅಧಿವೇಶನದಲ್ಲಿ ಘೋಷಿಸಿ ಜಾರಿಗೊಳಿಸಬೇಕು ಎಂದು ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ಒತ್ತಾಯಿಸಿದೆ.
ಹಾನಗಲ್ಲಿನಲ್ಲಿ ತಾಲೂಕು ದಂಡಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಿಸಿದ ರೈತ ಸಂಘಟನೆ, ಡಿಸೆಂಬರ ತಿಂಗಳಿನಲ್ಲಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಹಾನಗಲ್ಲ ತಾಲೂಕಿನ ನೀರಾವರಿಗೆ ಹೆಚ್ಚು ಅನುದಾನ ನೀಡಬೇಕು. ಬಮ್ಮನಹಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಾನಗಲ್ಲ ತಾಲೂಕಿನಲ್ಲಿ ನೀರಾವರಿ ಯೋಜನೆ ರೂಪಿಸುವಲ್ಲಿ ಸರಕಾರ ನಿರ್ಲಕ್ಷ ತೋರಿರುವ ಕಾರಣದಿಂದಾಗಿ ತಾಲೂಕಿನ ಉತ್ತರ ಭಾಗವನ್ನು ಎಲ್ಲ ರೀತಿಯಿಂದಲೂ ಕಡೆಗಣಿಸಲಾಗಿದೆ. ಬಾಳಂಬೀಡ ಏತ ನೀರಾವರಿ ಯೋಜನೆ ಜಾರಿಗೊಳಿಸಿದರೆ ಈ ಭಾಗದ ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯ. ತಾಲೂಕಿನಲ್ಲಿಯೇ ಹರಿದಿರುವ ದೊಡ್ಡ ವರದಾ ನದಿಯ ನೀರನ್ನು ಬಳಸಿಕೊಳ್ಳುವಲ್ಲಿ ಸರಕಾರ ವಿಫಲವಾಗಿದೆ. ವಿಧಾನಸಭೆ ಚುನಾವಣೆಗೂ ಮೊದಲು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಬಾಳಂಬೀಡ ಏತ ನೀರಾವರಿ ಯೋಜನೆಯನ್ನು ಜಾರಿಗೆ ತರುವುದಾಗಿ ಘೋಷಣೆ ಮಾಡಿತು. ಆದರೆ ಚುನಾವಣೆ ಸಂದರ್ಭದಲ್ಲಿ ಈ ಯೋಜನೆ ಮಾತ್ರ ಜಾರಿಗೆ ಬರದೇ ನಿರಾಸೆಯಾಗಿದೆ.
ಹಾಲಿ ಸರಕಾರ ಬಾಳಂಬೀಡ ಏತ ನೀರಾವರಿ ಯೋಜನೆಯನ್ನು ಬರು ಅಧಿವೇಶನದಲ್ಲಿ ಘೋಷಿಸಿ ಅಗತ್ಯ ಅನುದಾನ ಮೀಸಲಿರಿಸಿ, ಕಾಮಗಾರಿ ಆರಂಭವಾಗುವಂತಾಗಬೇಕು ಎಂದು ಒತ್ತಾಯಿಸಿ, ಸರಕಾರದ ಇಚ್ಛಾಶಕ್ತಿಯನ್ನು ಪರೀಕ್ಷಿಸುವ ಕಾಲ ಇದಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಅತಿ ದೊಡ್ಡ ತಾಲೂಕಿನಲ್ಲಿ ಮೊದಲ ಸಾಲಿನಲ್ಲಿರುವ ಹಾನಗಲ್ಲ ತಾಲೂಕಿನ್ನು ವಿಂಗಡಿಸುವುದು ಅತ್ಯವಶ್ಯವಾಗಿದೆ. 150 ಕ್ಕೂ ಹೆಚ್ಚು ಗ್ರಾಮಗಳು, ಅತಿ ದೊಡ್ಡ ವಿಸ್ತಾರವನ್ನೂ ಹೊಂದಿದ ಹಾನಗಲ್ಲ ತಾಲೂಕನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ, ಸಾರ್ವಜನಿಕರಿಗೆ ಸುಲಭವಾಗಿ ಸೌಲಭ್ಯಗಳು ದೊರೆಯಬೇಕಾದರೆ ತಾಲೂಕನ್ನು ವಿಂಗಡಿಸಿ ತಾಲೂಕಿನ ಅತಿ ದೊಡ್ಡ ಗ್ರಾಮದಲ್ಲೊಂದಾದ ಬಮ್ಮನಹಳ್ಳಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಹಾತ್ಮಾಗಾಂಧೀ ಉದ್ಯೋಗ ಖಾತರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಸರಕಾರಿ ಶಾಲೆಗಳ ಬಲವರ್ಧನೆಗೆ ಪ್ರತಿ ಗ್ರಾಮ ಪಂಚಾಯತಿಗೊಂದರಂತೆ ಮುರಾರ್ಜಿ ದೇಸಾಯಿ ಮಾದರಿಯ ವಸತಿ ಶಾಲೆಗಳನ್ನು ಆರಂಭಿಸಬೇಕು. 1 ನೇ ತರಗತಿಯಿಂದ 10 ತರಗತಿಯವರೆಗಿನ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಇದು ಹೆಚ್ಚು ಸಹಕಾರಿ. ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯಗಳು ಹಗಲುಗನಸಾಗಿವೆ. ಜಿಲ್ಲಾ ಕೇಂದ್ರಗಳಿಗೆ ಅಲೆದು ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾನಗಲ್ಲ ಸೇರಿದಂತೆ ರಾಜ್ಯದ
ಎಲ್ಲ ತಾಲೂಕು ಕೇಂದ್ರಗಳಲ್ಲಿ ಕಾರ್ಮಿಕ ಇಲಾಖೆ ಕಛೇರಿಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.ಹುಬ್ಬಳ್ಳಿಯಿಂದ ಶಿವಮೊಗ್ಗವರೆಗೆ ತಡಸ್, ಬಮ್ಮನಹಳ್ಳಿ, ಹಾನಗಲ್ಲ, ಆನವಟ್ಟಿ, ಶಿರಾಳಕೊಪ್ಪ, ಶಿಕಾರಿಪುರ ಮಾರ್ಗವಾಗಿ ರೈಲು ಮಾರ್ಗ ಆರಂಭವಾಗಬೇಕು. ಅದರಂತೆ ಕಾರವಾರದಿಂದ ಬಳ್ಳಾರಿಗೆ ಯಲ್ಲಾಪುರ, ಮಂಚಿಕೇರಿ, ಕಾತೂರು, ಶಿರಹಟ್ಟಿ, ಮುಂಡರಗಿ, ಕೊಪ್ಪಳ ಮಾರ್ಗವಾಗಿ ಹೊಸ ರೈಲು ಮಾರ್ಗ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಾಲೂಕು ಘಟಕದ ಅಧ್ಯಕ್ಷ ಜಯಣ್ಣ ಅಂಗಡಿ, ಉಪಾಧ್ಯಕ್ಷ ಶಿವಾನಂದ ಬೈಲಣ್ಣನವರ, ಕಾರ್ಯದರ್ಶಿ ಮಲ್ಲನಗೌಡ ಪಾಟೀಲ, ಸಹಕಾರ್ಯದರ್ಶಿ ಪ್ರಕಾಶ ದಾನಪ್ಪನವರ, ಮಾಲಿಂಗಪ್ಪ ಬಿದರಮಳಿ, ಸಿದ್ದನಗೌಡ ಕಾಲ್ವೇಕಲ್ಲಾಪುರ, ಶಿವಪುತ್ರಪ್ಪ ಮನ್ನಂಗಿ, ಶಿವಾನಂದ ಬಿಡೇದ, ವಿ.ಎಫ್.ಕಟ್ಟೆಪ್ಪನವರ, ಎಂ.ಎಸ್.ಪಾಟೀಲ, ಖಾದರಮೊಹಿದ್ದೀನ ಶೇಖ್, ಆರ್.ವಿ.ಬಡಿಗೇರ, ವಸಂತ ಓಲೇಕಾರ, ಬಸಪ್ಪ ಚಂದ್ರಗೇರಿ, ಶಂಭಣ್ಣ ಕಮ್ಮಾರ ಸೇರಿದಂತೆ ರೈತ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ