ವಿದ್ಯಾರ್ಥಿ ಮೇಲೆ ಖಾಸಗಿ ಬಸ್ ಹರಿದು ಸ್ಥಳದಲ್ಲೆ ಸಾವು

ದೊಡ್ಡೇರಿ

    ಶಾಲೆಗೆ ಗೈರು ಹಾಜರಾಗಿದ್ದ ತಮ್ಮ ಸಹಪಾಠಿಯನ್ನು ಕರೆತರಲು ಸೈಕಲ್‍ನಲ್ಲಿ ಹೋಗಿ ಮತ್ತೆ ಶಾಲೆಗೆ ವಾಪಸ್ಸು ಬರುತ್ತಿದ್ದ ವಿದ್ಯಾರ್ಥಿಗಳ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ, ವಿದ್ಯಾರ್ಥಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಸೋಮವಾರ ಬೆಳಗ್ಗೆ ಸುಮಾರು 11 ರ ಸಮಯದಲ್ಲಿ ನಡೆದಿದೆ.

       ತಾಲ್ಲೂಕಿನ ದೊಡ್ಡೇರಿ ಹೋಬಳಿಯ ದಬ್ಬೇಘಟ್ಟ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗೋಪಿ (13) ಎನ್ನುವ ವಿದ್ಯಾರ್ಥಿ ಶಾಲೆಯ ಅವಧಿಯಲ್ಲಿ ಮುಖ್ಯ ಶಿಕ್ಷಕಿಯ ಸೂಚನೆ ಮೇರೆಗೆ ಗುರುಪ್ರಸಾದ್(13) ಎಂಬ ವಿದ್ಯಾರ್ಥಿಯನ್ನು ಸೈಕಲ್‍ನಲ್ಲಿ ಕರೆದುಕೊಂಡು ಬರುತ್ತಿದ್ದಾಗ ಎದುರುಗಡೆಯಿಂದ ಬಂದಂತಹ ಖಾಸಗಿ ಬಸ್ ವಿದ್ಯಾರ್ಥಿಗಳ ಮೇಲೆ ಹರಿದಿದೆ.
ಸ್ಥಳದಲ್ಲಿಯೇ ತೊಣಚಗೊಂಡನಹಳ್ಳಿಯ ವಿದ್ಯಾರ್ಥಿ ಗೋಪಿ ಮೃತಪಟ್ಟಿದ್ದು ಕೈಮರ ಗ್ರಾಮದ ಗುರುಪ್ರಸಾದ್ ಗಂಭೀರವಾಗಿ ಗಾಯಗೊಂಡಿದ್ದು ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಬಡವನಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

         ನಂತರ ವಿಷಯ ತಿಳಿದ ಬಾಲಕರು ಪೋಷಕರು ಮತ್ತು ಗ್ರಾಮಸ್ಥರು ಆಸ್ಪತ್ರೆ ಬಳಿ ಜಮಾವಣೆಗೊಂಡು ಮುಖ್ಯ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಡಿಡಿಪಿಐ ಮತ್ತು ಬಿಇಓ ರವರನ್ನು ಒತ್ತಾಯಿಸಿದರು. ಘಟನೆಯಿಂದಾಗಿ ಮೃತ ಬಾಲಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ವಿದ್ಯಾರ್ಥಿಯ ಕುಟುಂಬದವರು ಸಾವಿನ ಸುದ್ದಿ ಕೇಳಿ ಪ್ರಜ್ಞಾ ಹೀನರಾಗಿ ಆಸ್ಪತ್ರೆಯ ಬಳಿಯಿದ್ದ ವಾತಾವರಣ ಕಂಡು ಬಂತು. ಕೆಲ ಗ್ರಾಮಸ್ಥರು ಆತಂಕದಿಂದ ಆಗಮಿಸಿ ಯಾರ ಮಕ್ಕಳಿರಬಹುದೆಂಬ ತವಕದಲ್ಲಿದ್ದರು. ಮೃತ ವಿದ್ಯಾರ್ಥಿಯನ್ನು ನೋಡಲು ಆಸ್ಪತ್ರೆಯ ಸುತ್ತಲೂ ಭಾರಿ ಜನಸ್ತೋಮವೇ ಜಮಾವಣೆಗೊಂಡಿದ್ದರು.

          ಮಧುಗಿರಿ-ಶಿರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೆ ಪದೆ ಶಾಲಾ ವಿದ್ಯಾರ್ಥಿಗಳು ಹೆಚ್ಚಾಗಿ ಅಪಘಾತಕ್ಕೆ ತುತ್ತಾಗುತ್ತಿದ್ದು, ಅಪಘಾತಗಳು ನಡೆಯುವ ಸ್ಥಳಗಳು ಸೇರಿದಂತೆ ಶಾಲೆಗಳ ಬಳಿ ಸಂಬಂಧಪಟ್ಟ ಅಧಿಕಾರಿಗಳು ಬ್ಯಾರಿಕೇಡ್ ಮತ್ತು ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap