ಈರುಳ್ಳಿ ರಫ್ತು ನೀತಿ ಸಡಿಲಗೊಳಿಸಲು ಆಗ್ರಹ..!

ಬೆಂಗಳೂರು

     ಕೆಂಪು ಗುಲಾಬಿ ಈರುಳ್ಳಿ ರಫ್ತು ಸಂಪೂರ್ಣ ನಿಷೇಧವನ್ನು ಸಡಿಲಗೊಳಿಸಿ ರಾಜ್ಯದ ರೈತರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರಕ್ಕೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಧನ್ಯವಾದ ಹೇಳಿದ್ದಾರೆ. ಈರುಳ್ಳಿ ಬೆಲೆ ನಿಯಂತ್ರಣ ಉದ್ದೇಶದಿಂದ ಕೇಂದ್ರ ಸರ್ಕಾರ ಈರುಳ್ಳಿ ರಫ್ತನ್ನು ಸಂಪೂರ್ಣ ನಿಷೇಧಿಸಿದ್ದರಿಂದ ರಾಜ್ಯದ ಕೆಂಪು ಗುಲಾಬಿ ಈರುಳ್ಳಿ ಬೆಳೆಗಾರರು ದರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದರು.
ಈ ಹಿನ್ನೆಲೆಯಲ್ಲಿ ಕೆಂಪು ಈರುಳ್ಳಿ ನಿಷೇಧ ತೆರವುಗೊಳಿಸುವಂತೆ ರಾಜ್ಯಸರ್ಕಾರ ಮಾಡಿದ್ದ ಮನವಿಗೆ ಕೇಂದ್ರಸರ್ಕಾರ ಸ್ಪಂದಿಸಿ ನ. 30ರವರೆಗೆ 9 ಸಾವಿರ ಟನ್‍ವರೆಗೆ ರಫ್ತಿಗೆ ಅವಕಾಶ ನೀಡಿದೆ. ಇದರಿಂದ ರಾಜ್ಯದ ಈರುಳ್ಳಿ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ ಎಂದು ತಿಳಿಸಿದ್ದಾರೆ.

     ಕೆಂಪು ಗುಲಾಬಿ ಈರುಳ್ಳಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ರಫ್ತು ನಂಬಿಯೇ ರಾಜ್ಯದ ರೈತರು ಈ ಬೆಳೆ ಬೆಳೆಯುತ್ತಿದ್ದಾರೆ. ಆದ್ದರಿಂದ ರಫ್ತಿಗೆ ಯಾವುದೇ ನಿರ್ಬಂಧ ವಿಧಿಸದೆ ರೈತರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.ನಿಬಂಧನೆ ಏನು? ಪ್ರಸ್ತುತ ನ. 30ರವರೆಗೆ 9 ಸಾವಿರ ಟನ್‍ವರೆಗೆ ರಫ್ತಿಗೆ ಅವಕಾಶ ನೀಡಲಾಗಿದೆ ಎಂದು ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. ಚೆನ್ನೈ ಬಂದರಿನ ಮೂಲಕ ಮಾತ್ರ ರಫ್ತು ಮಾಡಬೇಕು, ಕರ್ನಾಟಕದ ತೋಟಗಾರಿಕೆ ಆಯುಕ್ತರು ಈರುಳ್ಳಿಗೆ ಮತ್ತು ರಫ್ತಿಗೆ ಪ್ರಮಾಣಪತ್ರ ನೀಡಲಿದ್ದಾರೆ.

     ಬೆಂಗಳೂರಿನಲ್ಲಿರುವ ಡಿಜಿಎಫ್‍ಟಿ ರಫ್ತಿನ ಮೇಲೆ ನಿಗಾ ಇರಿಸಲಿದೆ. ನಿಷೇಧ ಏಕಿತ್ತು? ಆಗಸ್ಟ್ ತಿಂಗಳಿನಿಂದ ಏರಿಕೆಯ ಹಾದಿಯಲ್ಲಿದ್ದ ಈರುಳ್ಳಿ ಬೆಲೆ ಏರಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವ ಕೆಂಪು ಗುಲಾಬಿ ಈರುಳ್ಳಿ ರಫ್ತಿಗೆ ಸೆಪ್ಟೆಂಬರ್ ತಿಂಗಳಿನಿಂದ ನಿಷೇಧ ಹೇರಲಾಗಿತ್ತು. ರೈತರ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ರಫ್ತು ನಿಷೇಧಕ್ಕೆ ವಿನಾಯಿತಿ ನೀಡಿದೆ. ವಿದೇಶಗಳಲ್ಲಿ ಹೆಚ್ಚು ಬೇಡಿಕೆ ಇರುವ ಗಾತ್ರದಲ್ಲಿ ಚಿಕ್ಕದಾದ ಗುಲಾಬಿ ಬಣ್ಣದ ಈರುಳ್ಳಿಯನ್ನು ಹೆಚ್ಚಾಗಿ ಶ್ರೀಲಂಕಾ, ಮಲೇಷಿಯಾ ಮತ್ತಿತರ ದಕ್ಷಿಣ-ಪೂರ್ವ ದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link