ಬೆಂಗಳೂರು
ರಾಜ್ಯದ 13 ಸ್ಥಳೀಯ ಸಂಸ್ಥೆಗಳ ವಾರ್ಡ್ ವಾರು ಮೀಸಲು ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಇಂದು ರದ್ದುಗೊಳಿಸಿದೆ.
ಮೀಸಲು ನಿಗದಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ 30 ಅರ್ಜಿಗಳ ಪೈಕಿ 13 ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾ. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಸಂಬಂಧಿಸಿದ ಅಧಿಸೂಚನೆಗಳನ್ನು ರದ್ದುಗೊಳಿಸಿದ್ದು, 14 ದಿನಗಳಲ್ಲಿ ಹೊಸ ನಿಯಮಬದ್ಧವಾಗಿ ಮೀಸಲಾತಿಯನ್ನು ಮರು ಮರುನಿಗದಿಪಡಿಸಿ ಜ.28ರೊಳಗೆ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಇತರ ಕ್ಷೇತ್ರಗಳ ಮೀಸಲು ನಿಗದಿಗೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಲು ನ್ಯಾಯಪೀಠ ನಿರಾಕರಿಸಿದೆ.
ಮಂಗಳೂರು, ಚಿಕ್ಕಮಗಳೂರು, ಚನ್ನಪಟ್ಟಣ, ರಾಮನಗರ, ದೊಡ್ಡಬಳ್ಳಾಪುರ, ಗುಡಿಬಂಡೆ, ವಿಜಯಪುರ, ತೀರ್ಥಹಳ್ಳಿ, ಭದ್ರಾವತಿ, ಸಿರಾ, ತರೀಕೆರೆ, ಬೇಲೂರು, ಮಡಿಕೇರಿ ಸ್ಥಳೀಯ ಸಂಸ್ಥೆಗಳ ಮೀಸಲು ನಿಗದಿ ಅಧಿಸೂಚನೆ ರದ್ದಾಗಿದೆ.
ರಾಜ್ಯದಾದ್ಯಂತ 26 ಜಿಲ್ಲೆಗಳಲ್ಲಿನ 2,593 ಸ್ಥಳೀಯ ಸಂಸ್ಥೆಯ ವಾರ್ಡುಗಳಿಗೆ 2019ರ ಮಾರ್ಚ್‍ನಲ್ಲಿ ಅಧಿಕಾರವಧಿ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಚುನಾವಣಾ ಸಿದ್ಧತೆ ಆರಂಭಿಸಿದೆ.
ಏನಿದು ಪ್ರಕರಣ? ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಮರು ವಿಂಗಡಣೆ ಹಾಗೂ ವಾರ್ಡ್ ವಾರು ಮೀಸಲು ನಿಗದಿಪಡಿಸುವಾಗ ಸರ್ಕಾರ ಸೂಕ್ತ ನಿಯಮ ಹಾಗೂ ಮಾನದಂಡಗಳನ್ನು ಅನುಸರಿಸಿಲ್ಲ. ಸಂವಿಧಾನದ 243 (ಟಿ) ಪರಿಚ್ಛೇದದ ಅನುಸಾರ ಮೀಸಲು ನಿಗದಿ ಮಾಡಿಲ್ಲ ಎಂದು ಆಕ್ಷೇಪಿಸಿ ರಾಜ್ಯದ ವಿವಿಧ 30ಕ್ಕೂ ಹೆಚ್ಚು ಅರ್ಜಿದಾರರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ