ಧಾರವಾಡ
ಪೂರ್ಣ ಕುಂಭ ಮೆರವಣಿಗೆಯಲ್ಲಿ ಸ್ತ್ರೀಯರಿಗೆ ಅನ್ಯಾಯವಾಗಿದೆ ಎಂದು ನಾನು ಭಾವಿಸುವುದಿಲ್ಲ.ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಸರಿಯಾದ ಸಮಯದಲ್ಲಿ ಸರಿಯಾದ ತೀರ್ಮಾನ ಕೈಗೊಂಡಿದೆ ಎಂದು 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದ್ದಾರೆ.
ಸಮ್ಮೇಳನದ ಮೂರನೇ ಹಾಗೂ ದಿನವಾದ ಇಂದು ಪ್ರಧಾನ ವೇದಿಕೆಯಲ್ಲಿ ಏರ್ಪಡಿಸಿದ್ದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಸ್ತ್ರೀ ಬದುಕು ಕಟ್ಟುವ ಕೆಲಸ ಮಾಡಿದರೆ, ಪುರುಷ ಅಹಂಕಾರ ಪ್ರದರ್ಶಿಸಿ ಎಲ್ಲವನ್ನೂ ಗೆಲ್ಲುವ ಪ್ರವೃತ್ತಿ ಹೊಂದಿದ್ದಾನೆ. ಸ್ತ್ರೀ ಹೆತ್ತು ಹೊತ್ತು ಸಾಕಿ ಸಲಹಿದರೆ, ಗಂಡ ಯುದ್ಧ ಮಾಡಿ ಆಳುವ, ಅಧಿಪತ್ಯ ಸ್ಥಾಪಿಸುವ ಮನಸ್ಥಿತಿ ಹೊಂದಿದ್ದಾನೆ. ಸ್ತ್ರೀ ಮರದಂತೆ ಬೀಜ ಬಿತ್ತಿ ಸಮಾಜವನ್ನು ಬೆಳೆಸುತ್ತಾಳೆ. ಇಂತಹ ಸ್ತ್ರೀಯರಿಗೆ ಅನ್ಯಾಯವಾದರೆ ನಾನು ಸುಮ್ಮನಿರುವುದಿಲ್ಲ. ಆದರೆ ಕುಂಭ ಮೆರವಣಿಗೆಯಲ್ಲಿ ಯಾರಿಗೂ ಅನ್ಯಾಯವಾಗಿಲ್ಲ ಎಂದು ಸಮರ್ಥಿಸಿಕೊಂಡರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಎರಡೂ ಕೈಗಳಿರುವುದರಿಂದ ನಾನು ಎಡನೂ ಹೌದು, ಬಲನೂ ಹೌದು. ಈ ಎರಡೂ ಪಂಥಗಳ ಬಗ್ಗೆ ನನಗೆ ಇದುವರೆಗೆ ಸರಿಯಾಗಿ ಅರ್ಥವಾಗಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಸಾಹಿತಿ ಎಂ.ಎಂ. ಕಲ್ಬುರ್ಗಿ ಅವರು ನನ್ನ ಸಹಪಾಠಿ ಹಾಗೂ ಗೌರಿ ಲಂಕೇಶ್ ನಾನು ಎತ್ತಿ ಆಡಿಸಿದ ಮಗು. ಇವರಿಬ್ಬರ ಸಾವಿನಿಂದ ಅತಿಯಾದ ದುಃಖವಾಗಿದೆ.
ದನ್ನು ಸಾರ್ವಜನಿಕವಾಗಿ ತೋರ್ಪಡಿಸುವ ಅಗತ್ಯವಿಲ್ಲ. ಈ ಪ್ರಕರಣಗಳ ಕುರಿತು ನಾನು ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಅದನ್ನು ಇಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲ ಎಂದು ಖಡಕ್ ಆಗಿಯೇ ಉತ್ತರಿಸಿದರು. ವಿದ್ಯೆಯನ್ನು ಸೃಷ್ಟಿಸುವುದನ್ನು ಕಲಿಯಬೇಕು. ಈ ಚಿಂತನೆಯಿಂದಲೇ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟಲು ಸಾಧ್ಯವಾಯಿತು. ಇದಕ್ಕೆ ಆಗಿನ ಸರ್ಕಾರದ ಸಂಪೂರ್ಣ ಬೆಂಬಲ ಇದ್ದುದು ಕೂಡ ನಮ್ಮ ಸುಧೈವ. ಮುಂದಿನ ತಲೆಮಾರು ಪಾಶ್ಚಾತ್ಯದಿಂದ ಕಲಿಯುವುದಕ್ಕಿಂತ ಈ ನೆಲದೊಳಗೆ ಈಗಾಗಲೇ ಹಾಸುಹೊಕ್ಕಾಗಿರುವ ವಿದ್ಯೆಯನ್ನು ಪುನರ್ ಸೃಷ್ಟಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಇಂಗ್ಲಿಷ್ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಎಲ್ಲಾ ಸಲಕರಣೆಗಳನ್ನು ಕನ್ನಡ ಭಾಷೆ ಪ್ರಚಾರಕ್ಕೂ ಬಳಸಿಕೊಳ್ಳಬೇಕು. ಈ ಬಗ್ಗೆ ನಾನು ಮತ್ತು ಪೂರ್ಣಚಂದ್ರ ತೇಜಸ್ವಿ ಹಲವು ಕೆಲಸಗಳನ್ನು ಮಾಡಿದ್ದೇವೆ. ಹಲವು ರಾಜಕಾರಣಿಗಳನ್ನು ಭೇಟಿಯಾಗಿದ್ದೇವೆ. ಆದರೆ ಬಿ . ಎಸ್ ಯಡಿಯೂರಪ್ಪ ಹೊರತುಪಡಿಸಿ ತಮಗೆ ಯಾರೂ ಬೆಂಬಲ ನೀಡಲಿಲ್ಲ ಎಂದು ಕಂಬಾರರು ನೊಂದು ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ