ಹಾನಗಲ್ಲ :
ಸುರಕ್ಷಿತ ಜೀವನ ವಿಧಾನದಿಂದ ಆಯುಷ್ಯ ಆರೋಗ್ಯವನ್ನೂ ಹೆಚ್ಚಿಸಿಕೊಂಡು ನೆಮ್ಮದಿಯಿಂದ ಬದುಕಲು ಸಾಧ್ಯತೆ ಇದ್ದು, ನಿರ್ಲಕ್ಷ ಹಾಗೂ ಒಳ್ಳೆಯದರ ನಿರಾಕರಣೆಯಿಂದ ಅನಾಹುತಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಹಾನಗಲ್ಲಿನ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಾರದಾದೇವಿ ಹಟ್ಟಿ ಕರೆ ನೀಡಿದರು.
ಸೋಮವಾರ ಹಾನಗಲ್ಲಿನಲ್ಲಿ ಲೋಯಲಾ ವಿಕಾಶ ಕೇಂದ್ರ, ರೋಶನಿ ಸಮಾಜ ಸೇವಾ ಸಂಸ್ಥೆ, ತಾಲೂಕಾ ಆರೋಗ್ಯ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಸ್ಪಂಧನಾ ಮಹಿಳಾ ಒಕ್ಕೂಟ, ಪ್ರಗತಿ ಮಹಿಳಾ ಒಕ್ಕೂಟ ಸಂಯುಕ್ತವಾಗಿ ವಿಶ್ವ ಏಡ್ಸ ದಿನದ ಅಂಗವಾಗಿ ಆಯೋಜಿಸಿದ “ನಿಮ್ಮ ಎಚ್‍ಐವಿ ಸ್ಥಿತಿಯನ್ನು ತಿಳಿದುಕೊಳ್ಳಿ” ಕಾರ್ಯಕ್ರಮದ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ಮದುವೆಗೂ ಮೊದಲು ಆರೋಗ್ಯ ತಪಾಸಣೆ ಕಡ್ಡಾಯವೆಂಬ ಕಾನೂನು ಜಾರಿಯಾಗುತ್ತಿದೆ. ಇದರ ಅಗತ್ಯವೂ ಇದೆ.
ಅಸುರಕ್ಷಿತ ಜೀವನ ವಿಧಾನದಿಂದಾಗಿ ವೈಯಕ್ತಿಕ ಹಾಗೂ ಸಾಮೂಹಿಕ ಬದುಕು ಕೂಡ ಆತಂಕಕ್ಕೆ ಸಿಲುಕುವ ಸಾಧ್ಯತೆಗಳಿವೆ. ಇತ್ತೀಚಿನ ದಿನಗಳಲ್ಲಿ ಮೊಬೈಲನಂತಹ ಸುಲಭ ಸಾಧನಗಳು ಮನುಷ್ಯನ ಮನಸ್ಸನ್ನು ವಿಕೃತಗೊಳಿಸಿ ಮಾನವೀಯತೆಯನ್ನೇ ಮರೆತು ದುಷ್ಕøತ್ಯಕ್ಕೆ ಪ್ರೇರೇಪಿಸುವ ಸಂದರ್ಭಗಳಿವೆ. ಯುವ ಸಮದಾಯ ಬಹಳಷ್ಟು ಎಚ್ಚರಿಕೆಯಿಂದ ಸಾಗಬೇಕು. ನಾಳೆಯ ನಮ್ಮ ಭವಿಷ್ಯಕ್ಕಾಗಿ ಈಗಲೇ ಚಿಂತನೆ ನಮ್ಮಲ್ಲಿರಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ತಾಲೂಕಾ ವೈದ್ಯಾಧಿಕಾರಿ ಡಾ.ವಾಯ್.ಎನ್.ಹರೀಶ ಮಾತನಾಡಿ, ಏಡ್ಸ ಎಂಬ ಕ್ರೂರ ರೋಗ ಹರಡಿ ಸಮಾಜವನ್ನು ದಾರಿ ತಪ್ಪಿಸುವ ಮೊದಲು, ಏಡ್ಸ ಪರೀಕ್ಷೆಗೆ ಒಳಗಾಗಿ ನೆಮ್ಮದಿಯಿಂದ ಬದುಕಬೇಕು. ಏಡ್ಸ ರೋಗಿಯಾಗಿದ್ದರೆ ಔಷದೋಪಚಾರ ಪಡೆದು ದೀರ್ಘಾವಧಿ ಬದುಕಲು ಸಾಧ್ಯ. ಈ ರೋಗದ ಬಗೆಗೆ ಎಚ್ಚರಿಕೆ ಬೇಕೆ ಹೊರತು ಭಯ ಬೇಡ. ಏಡ್ಸ ರೋಗಿನ್ನು ದೂರವಿಡಬೇಡಿ. ಏಡ್ಸ ರೋಗವನ್ನು ದೂರವಿಡಿ ಎಂದು ಮನವಿ ಮಾಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ಏಡ್ಸ ರೋಗ ತಡೆಗೆ ಕ್ರಮಗಳು ಕುರಿತು ಸಮಾಲೋಚನೆ ನಡೆಸಿದರು.
ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕೋತಂಬರಿ ಮುಖ್ಯ ಅತಿಥಿಯಾಗಿ ಮಾತನಾಡಿ, ಆರೋಗ್ಯ ಇಲಾಖೆ ಸುರಕ್ಷತಾ ಕ್ರಮಗಳ ಬಗೆಗೆ ಭಾಷಣ ಮಾಡಿದರೆ ಸಾಲದು. ಸರಕಾರ ಅನುದಾನ ಬಳಸಿಕೊಂಡು ಏಡ್ಸನಿಂದ ದೂರವಿರಲು, ಏಡ್ಸ ಕಾಯಿಲೆಗೆ ಒಳಗಾಗಿದ್ದರೆ ಮತ್ತೊಬ್ಬರಿಗೆ ಹರಡದಂತೆ ಕ್ರಮ ಜರುಗಿಲು ಹಾಗೂ ಇದಕ್ಕೆ ಸಂಬಂಧಿಸಿದ ವಿಚಾರಗಳನ್ನು ಮನೆ ಮನೆಗಳಿಗೆ ಪ್ರಚಾರಗೊಳಿಸುವಲ್ಲಿ ವಿಫಲವಾಗಬಾರದು ಎಂದು ಎಚ್ಚರಿಸಿದರು. ಅಜ್ಞಾನ ಅಂಧಃಕ್ಕಾರದಿಂದ ಇಂಥ ರೋಗಕ್ಕೆ ತುತ್ತಾಗಬೇಕಾಗುತ್ತದೆ ಎಂದರು.
ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ಜೆರಾಲ್ಡ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಸಿಪಿಐ ರೇವಣ್ಣ, ಪಿಎಸ್‍ಐ ಗುರುರಾಜ ಮೈಲಾರ, ಏಡ್ಸ ಆಪ್ತಸಮಾಲೋಚಕ ಬಸವರಾಜ ಮೈಕಲೋರ, ರೋಶನಿ ಸಮಾಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಡಿಂಪಲ್ ಡಿಸೋಜಾ, ಎನ್‍ಎಸ್‍ಎಸ್ ಅಧಿಕಾರಿ ಎಚ್.ಎಸ್.ಬಾರ್ಕಿ, ಪ್ರಗತಿ ಲೋಯಲಾ ಒಕ್ಕೂಟದ ಅಧ್ಯಕ್ಷೆ ಭಾರತಿ ಪೂಜಾರ ಅತಿಥಿಗಳಾಗಿದ್ದರು.
ಜಾಥಾ :
ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭವಾದ ಏಡ್ಸ ಜಾಗೃತಿ ಜಾಥಾ ಮಾಹಾತ್ಮಾಗಾಂಧಿ ವೃತ್ತ ತಲುಪಿ ಅಲ್ಲಿ ಏಡ್ಸ ಜಾಗೃತಿ ನಾಟಕವನ್ನು ಮಂಗಳೂರು ಅಲೋಸಿಯಸ್ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
