ಕೆಂಚಮಾರಯ್ಯ ವಿರುದ್ಧ ಮಧುಗಿರಿ ಮುಖಂಡರುಗಳ ಆಕ್ರೋಶ

ತುಮಕೂರು:

    ಕೆ.ಎನ್.ರಾಜಣ್ಣ ಅವರ ಬಲದಿಂದಲೇ ಅಧಿಕಾರ ಗಳಿಸಿ ಈಗ ಅವರ ವಿರುದ್ಧವೇ ಮಾತನಾಡುತ್ತಿರುವ ಕೆಂಚಮಾರಯ್ಯ ಅವರ ವಿರುದ್ಧ ಮಧುಗಿರಿಯ ಹಲವು ಮುಖಂಡರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ತುಮಕೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಸುಮಾರು 15ಕ್ಕೂ ಹೆಚ್ಚು ಮುಖಂಡರು ಕೆ.ಎನ್.ರಾಜಣ್ಣ ಪರ ಬ್ಯಾಟಿಂಗ್ ಆಡುತ್ತಲೇ ಕೆಂಚಮಾರಯ್ಯ ಹಾಗೂ ಇತರರ ವಿರುದ್ಧ ವಾಗ್ದಾಳಿ ನಡೆಸಿದರು.

     ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್.ಡಿ.ಕೃಷ್ಣಪ್ಪ ಮಾತನಾಡಿ ಕೆ.ಎನ್.ರಾಜಣ್ಣ ಅವರು ಕಾಂಗ್ರೆಸ್ ಕಟ್ಟಿದಾಗ ಕೆಂಚಮಾರಯ್ಯ, ರಾಮಕೃಷ್ಣ ಇವರಾರೂ ಇರಲಿಲ್ಲ. ಆನಂತರ ಕೆ.ಎನ್.ರಾಜಣ್ಣ ಅವರ ಬಲದಿಂದಲೇ ಇವರೆಲ್ಲಾ ಬೆಳೆದವರು. 1987 ರಲ್ಲಿ ಕೆಂಚಮಾರಯ್ಯ ಇನ್ನೂ ಅಧಿಕಾರಿಯಾಗಿದ್ದರು. ಪರಮೇಶ್ವರ್ ಸಹ ಕಾಂಗ್ರೆಸ್‍ನಲ್ಲಿ ಸಕ್ರಿಯರಾಗಿರಲಿಲ್ಲ. ಈಗ ಕೆಂಚಮಾರಯ್ಯ ಕೆ.ಎನ್.ಆರ್. ವಿರುದ್ಧ ಮಾತನಾಡುತ್ತಿದ್ದಾರೆಂದರೆ ಅವರ ಹಿಂದೆ ಯಾರದ್ದೋ ಚಿತಾವಣೆ ಇದೆ ಎಂದು ಆರೋಪಿಸಿದರು.

     ಕೆ.ಎನ್.ರಾಜಣ್ಣ ಅವರು ಕೆಂಚಮಾರಯ್ಯ ಅವರಿಗೆ ನಾನಾ ರೀತಿಯ ರಾಜಕೀಯ ಅವಕಾಶಗಳನ್ನು ಕಲ್ಪಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರನ್ನಾಗಿ ಮಾಡಿದರು. ಕಾಂಗ್ರೆಸ್ಸನ್ನು ಕಟ್ಟಿದ ಮಹಾನ್ ಶಕ್ತಿಯ ವಿರುದ್ಧವೇ ಅವರು ಮಾತನಾಡುತ್ತಿರುವುದು ನಮಗೆಲ್ಲಾ ತುಂಬಾ ಅಸಮಾಧಾನ ತರಿಸಿದೆ. ಈ ಮೂಲಕ ನಾವು ಅವರಿಗೆ ಎಚ್ಚರಿಕೆಯನ್ನು ಕೊಡುತ್ತಿದ್ದೇವೆ ಎಂದರು.

    ತಾಲ್ಲೂಕು ಪಂಚಾಯತಿ ಸದಸ್ಯ ರಾಮಣ್ಣ ಮಾತನಾಡಿ 1967 ರಲ್ಲಿ ಕೆ.ಎನ್.ಆರ್. ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಸದೃಢಗೊಳಿಸಿದರು. ಕೆಂಚಮಾರಯ್ಯ ಈ ಹಿಂದೆ ಜೆ.ಡಿ.ಎಸ್.ನಲ್ಲಿದ್ದವರು. ಕೆ.ಎನ್.ಆರ್. ಆಶೀರ್ವಾದದಿಂದ ಜಿಲ್ಲಾ ಪಂಚಾಯತಿ ಸದಸ್ಯರಾದರು. ಇಷ್ಟೆಲ್ಲಾ ಇದ್ದರೂ 2018ರ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾದರು. ಜೆ.ಡಿ.ಎಸ್.ನ ವೀರಭದ್ರಯ್ಯ ಪರ ಕೆಲಸ ಮಾಡಿದರು. ಹೀಗಾಗಿ ಕಾಂಗ್ರೆಸ್ ವಿರೋಧಿ ಆರೋಪಕ್ಕೆ ಗುರಿಯಾಗಿರುವವರು ಕೆಂಚಮಾರಯ್ಯ ಅವರೇ ಹೊರತು ಕೆ.ಎನ್.ರಾಜಣ್ಣ ಅಲ್ಲ ಎಂದರು.

    ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರುಗಳಾದ ದೊಡ್ಡೇರಿ ಕಣಿಮಯ್ಯ, ಸಿದ್ದಪ್ಪ, ಹನುಮಂತಯ್ಯ, ಸಿದ್ದಗಂಗಯ್ಯ, ಸಿದ್ದಾಪುರ ಈರಣ್ಣ, ಹೆಂಜಾರಪ್ಪ, ಜಿತೇಂದ್ರಕುಮಾರ್, ಶಂಕರಪ್ಪ, ದೇವರಾಜು, ಲೋಕೇಶ್, ಆನಂದ್, ರಾಮು ಮುಂತಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link