ಕೊರಟಗೆರೆ
ತುಮಕೂರು ಮತ್ತು ಕೊರಟಗೆರೆ ರಾಜ್ಯ ಹೆದ್ದಾರಿಯ ಜಟ್ಟಿ ಅಗ್ರಹಾರದಲ್ಲಿ ಬುಧವಾರ ಬೆಳಗ್ಗೆ 9 ಗಂಟೆಗೆ ಖಾಸಗಿ ಬಸ್ ವೇಗವಾಗಿ ಬಂದು, ಅಡ್ಡ ಬಂದ ಆಟೋವನ್ನು ತಪ್ಪಿಸಲು ಹೋಗಿ ಪಕ್ಕಕ್ಕೆ ಪಲ್ಟಿ ಹೊಡೆದು, ಐದು ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಹಲವಾರು ಜನರಿಗೆ ಗಂಭೀರ ಹಾಗೂ ಸಣ್ಣಪುಟ್ಟ ಗಾಯಗಳಾಗಿವೆ.
ಈ ಹೆದ್ದಾರಿ ಮಾರ್ಗದಲ್ಲಿ ಪ್ರ್ರಾದೇಶಿಕ ಸಾರಿಗೆ ಇಲಾಖೆ ಬಸ್ಸುಗಳಿಗೆ ಕಾಲಮಿತಿಯನ್ನು ನಿಮಿಷಗಳ ಲೆಕ್ಕದಲ್ಲಿ ನೀಡಿರುವುದರಿಂದ ವೇಗದಲ್ಲಿ ಹೆಚ್ಚಳವಾಗಿ, ಈ ರೀತಿಯ ಅಪಘಾತಗಳು ಸಂಭವಿಸುತ್ತಿವೆ. ಕೂಡಲೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೂಡಿ, ಇದರ ನ್ಯೂನತೆಯನ್ನು ತಾಂತ್ರಿಕವಾಗಿ ಮನಗಂಡು ಬಗೆಹರಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆ ನಡೆಯದಂತೆ ಕ್ರಮ ವಹಿಸಬೇಕು. ಇಂತಹ ಮಿತಿಮೀರಿದ ವೇಗವು ಕಂಡು ಬಂದಲ್ಲಿ ಪೋಲೀಸ್ ಇಲಾಖೆ ತಕ್ಷಣ ಇಂತಹ ವಾಹನಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದ ಅವರು, ಮುಖ್ಯವಾಗಿ ಸರ್ಕಾರವು ಮೃತರ ಕುಟುಂಬಗಳಿಗೆ ಶೀಘ್ರ ಪರಿಹಾರವನ್ನು ನೀಡಬೇಕಿದ್ದು, ಮೃತಪಟ್ಟವರೆಲ್ಲರೂ ತುಮಕೂರಿಗೆ ದಿನ ಕೂಲಿ ಕೆಲಸಕ್ಕೆ ಬಂದು ಹೋಗುವ ಕಡುಬಡವರಾಗಿದ್ದಾರೆ.
ಮಾನವೀಯತೆಯಿಂದ ಸರ್ಕಾರ ಈ ಕೆಲಸವನ್ನು ಮೊದಲು ಮಾಡಬೇಕಿದೆ. ಅದೇ ರೀತಿಯಾಗಿ ಗಾಯಾಳುಗಳು ತುಮಕೂರು ಮತ್ತು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ವಿಶೇಷವಾದ ಚಿಕಿತ್ಸೆಯನ್ನು ನೀಡಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಭವಿಷ್ಯದಲ್ಲಿ ಇಂತಹ ದುರಂತಗಳು ಸಂಭವಿಸದೆ ಇರುವಂತೆ ಕ್ರಮ ವಹಿಸುವುದು ಜನಪ್ರತಿನಿದಿಗಳ ಹಾಗೂ ಅಧಿಕಾರಿಗಳ ಕರ್ತವ್ಯವಾಗಿದೆ. ಚಾಲಕರೂ ಸಹ ಜಾಗರೂಕತೆಯಿಂದ ವಾಹನಗಳನ್ನು ಚಾಲನೆ ಮಾಡಬೇಕಿದೆ ಎಂದು ಅವರು ತಿಳಿಸಿದರು.
ಮಧುಗಿರಿ ಕ್ಷೇತ್ರದ ಶಾಸಕ ವೀರಭದ್ರಯ್ಯ, ತಹಸೀಲ್ದಾರ್ ಗೋವಿಂದರಾಜು, ಪ.ಪಂ ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್, ಜಿಲ್ಲಾ ವೈದ್ಯಾಧಿಕಾರಿ ಚಂದ್ರಿಕಾ, ಕೊರಟಗೆರೆ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಪ್ರಕಾಶ್ ಎನ್, ತಾ.ಪಂ ಉಪಾಧ್ಯಕ್ಷ ವೆಂಕಟಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವತ್ಥನಾರಾಯಣ, ಅರಕೆರೆ ಶಂಕರ್, ಮುಖಂಡರುಗಳಾದ ಮಯೂರ ಗೋವಿಂದರಾಜು, ಮಕ್ತಿಯಾರ್, ಅರವಿಂದ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
