ಧಾರವಾಡ
ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸಾಮಾನ್ಯ ಪ್ರಜೆ ಹಾಗೂ ರಾಷ್ಟ್ರಪತಿಗೂ ಒಂದೇ ಕಾನೂನು ಅನ್ವಯವಾಗುತ್ತದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ನಿಗಮ ಏರ್ಪಡಿಸಿದ ನೃಪತುಂಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿ ಮಾಡಿರುವ ಹೊಸ ಮೋಟಾರು ಕಾಯ್ದೆ ಅನ್ವಯ, ಸಂಚಾರ ನಿಯಮ ಉಲ್ಲಂಘಿಸಿದ ಎಲ್ಲಾ ವಾಹನ ಸವಾರರಿಗೆ ಏಕ ರೂಪದಲ್ಲಿ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ ಎಂದರು.
ದಂಡವನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಗುಜರಾತ್ ರಾಜ್ಯದ ಮಾದರಿಯಲ್ಲಿ ಈ ದರವನ್ನು ಈಗಾಗಲೇ ಕಡಿಮೆ ಮಾಡಲಾಗಿದೆ. ಈ ಕುರಿತು ಕಾನೂನು ಇಲಾಖೆಗೆ ಎಲ್ಲಾ ಮಾಹಿತಿ ನೀಡಲಾಗಿದ್ದು, ನಾಳೆ ಸಂಜೆಯೊಳಗೆ ವರದಿ ಬರಲಿದೆ. ನಂತರ ವರದಿ ಪರಿಶೀಲಿಸಿ ಹೊಸ ಆದೇಶ ಹೊರಡಿಸುವುದಾಗಿ ಡಿಸಿಎಂ ಭರವಸೆ ನೀಡಿದರು.
ಗೋವಾ ಮುಖ್ಯಮಂತ್ರಿಗಳು ಮಹದಾಯಿ ಸಭೆ ನಡೆಸಲು ನಿಗದಿತ ಸಮಯ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಅಲ್ಲಿನ ವಿರೊಧ ಪಕ್ಷದ ನಾಯಕರು ನಮ್ಮ ರಾಜ್ಯದ ಬೇಡಿಕೆಗೆ ಮಣೆ ಹಾಕದಂತೆ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ಮಹದಾಯಿ ಸಭೆ ಮುಂದೂಡಲಾಗಿದೆ ಎಂದರು.
ಈಗಾಗಲೇ ರಾಜ್ಯದ ನೆರೆ ಹಾನಿ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಕೇರಳದಲ್ಲಿಯೂ ಅತಿವೃಷ್ಟಿ ಆಗಿದೆ. ಹೀಗಾಗಿ ಎಲ್ಲರೊಂದಿಗೆ ಪರಿಹಾರ ನೀಡುವ ಆಲೋಚನೆ ನಡೆದಿದ್ದು, ಶೀಘ್ರವೇ ಪರಿಹಾರ ದೊರೆಯಲಿದೆ ಎಂದರು.ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ನಾಯಕರು. ಅವರಡಿಯಲ್ಲಿಯೇ ನಾವು ಕೆಲಸ ಮಾಡುತ್ತಿರುವುದು. ಅವರು ತಮ್ಮನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಹಾರಾಷ್ಟ್ರ ಚುನಾವಣೆ ಬಗ್ಗೆ ಚರ್ಚೆ ಆಗಿದೆ. ರಾಜ್ಯದಲ್ಲಿ ಉಪಚುನಾವಣೆ ನಡೆಸುವುದರ ಕುರಿತು ಚರ್ಚೆಯಾಗಿಲ್ಲ ಎಂದು ಸವದಿ ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ