ಚಳ್ಳಕೆರೆ
ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಸಮಿತ್ರ ಸರ್ಕಾರ ಉತ್ತಮ ಆಡಳಿತದ ಮೂಲಕ ಜನರ ಭಾವನೆಗಳಿಗೆ ನಿರಂತರ ಸ್ಪಂದಿಸುತ್ತಾ ಬಂದಿದೆ. ರೈತರ ಸಾಲ ಮನ್ನಾ, ಸಣ್ಣ ವ್ಯಾಪಾರಸ್ಥರಿಗೆ ಬಡ್ಡಿ ರಹಿತ ಸಾಲವೂ ಸೇರಿದಂತೆ ಹಲವಾರು ಯೋಜನೆಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಾರಿಗೆ ತಂದ ಹಿನ್ನೆಲೆಯಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆಯೂ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸಮಿಶ್ರ ಸರ್ಕಾರದ ಗೆಲುವಿಗೆ ಮತದಾರರು ಮತದಾನದ ಮೂಲಕ ಸಮರ್ಥನೆ ನೀಡಿದ್ದಾರೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಬುಧವಾರ ಶಾಸಕ ಕಚೇರಿ ಆವರಣದಲ್ಲಿ ಪಕ್ಷದ ಅನೇಕ ಮುಖಂಡರೊಡನೆ ಬಳ್ಳಾರಿಗೆ ತೆರಳಿ ಚುನಾವಣೆಯಲ್ಲಿ ವಿಜಯ ಸಾಧಿಸಿ ಇದೇ ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶ ಮಾಡುತ್ತಿರುವ ಲೋಕಸಭಾ ಸದಸ್ಯ ವಿ.ಎಸ್.ಉಗ್ರಪ್ಪನವರನ್ನು ಅಭಿನಂದಿಸಿದಲ್ಲದೆ ಬಳ್ಳಾರಿ ಕ್ಷೇತ್ರ ಹಿರಿಯ ಮುಖಂಡರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪರವರನ್ನು ಸಹ ಅಭಿನಂದಿಸುವುದಾಗಿ ತಿಳಿಸಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯೆಂದು ಬಿಜೆಪಿಯವರೇ ಅಬ್ಬರ ಪ್ರಚಾರ ನಡೆಸಿದ್ದರು. ಯಾವುದೇ ಕಾರಣಕ್ಕೂ ವಲಸೆ ಬಂದ ವಿ.ಎಸ್.ಉಗ್ರಪ್ಪನವರ ಗೆಲುವು ಅಸಾಧ್ಯವೆಂಬ ಪ್ರಚಾರ ಹೆಚ್ಚಾಗಿತ್ತು. ಆದರೆ, ಮೈತ್ರಿ ಕೂಟದ ಸರ್ಕಾರದ ಸಾಧನೆಗಳು, ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರ ಹಾಗೂ ಕಾರ್ಯಕರ್ತರ ಅವಿರತ ಶ್ರಮ ರಾಹುಲ್ ಗಾಂಧಿಯವರ ಮಾರ್ಗದರ್ಶನ ಈ ಕ್ಷೇತ್ರದಲ್ಲಿ ಪಕ್ಷ ಚರಿತ್ರಾರ್ಹ ಲೀಡಿನೊಂದಿಗೆ ಜಯ ಸಾಧಿಸಿದೆ ಎಂದರು. ಚಳ್ಳಕೆರೆ ಕ್ಷೇತ್ರದ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರ ಪರವಾಗಿ ಲೋಕಸಭಾ ಸದಸ್ಯ ವಿ.ಎಸ್.ಉಗ್ರಪ್ಪನವರಿಗೆ ಅಭಿನಂದನೆಯನ್ನು ಸಲ್ಲಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ರವಿಕುಮಾರ್ ಮಾಜಿ ಸದಸ್ಯ ಬಾಬುರೆಡ್ಡಿ, ಚನ್ನಕೇಶವ ಮುಂತಾದವರು ಇದ್ದರು.