ಸಂಕ್ರಮಣ ಸಾಹಿತ್ಯ ಬಳಗ ಉದ್ಗಾಟನೆ

ಹಾವೇರಿ :

      ನಗರದ ಸರಕಾರಿ ನೌಕರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೊಸ ಬರಹಗಾರರಿಗೆ ಉತ್ತೇಜನ ಕೊಡುವ ಉದ್ದೇಶದಿಂದ ಸಂಕ್ರಮಣ ಸಾಹಿತ್ಯ ಬಳಗಕ್ಕೆ ಹಿರಿಯ ಲೇಖಕ ಪ್ರೊ. ಚಂದ್ರಶೇಖರ ಪಾಟೀಲ ಚಾಲನೆ ನೀಡಿದರು.

       ನಂತರ ಮಾತನಾಡಿದ ಅವರು ಇದೇ ಡಿಸೆಂಬರ್ ತಿಂಗಳು ಧಾರವಾಡದಲ್ಲಿ ಜರುಗಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡ ಡಾ. ಚಂದ್ರಶೇಖರ ಕಂಬಾರವರಿಗೆ ಅಭಿನಂದಿಸುವ ಮೂಲಕ ವೇದಿಕೆ ಕೆಲಸ ಆರಂಭಿಸಿತು. ಕಂಬಾರರು ಒಬ್ಬ ಹಳ್ಳಿ ಮೂಲದಿಂದ ಬಂದ ಸಹಜ ಸಾಹಿತಿ. ತಮ್ಮ ಕಾವ್ಯ ನಾಟಕ ಕಾದಂಬರಿಗಳಲ್ಲಿ ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಜಾನಪದ ಸತ್ವದ ಮೂಲಕ ಸೂರೆಗೊಂಡವರು ಎಂದು ಚಂಪಾ ಹೇಳಿದರು.

      ಸಂಕ್ರಮಣ ಸಾಹಿತ್ಯ ಬಳಗ ದ ಉದ್ದೇಶಗಳನ್ನು ವಿವರಿಸಿದ ಚಂಪಾರವರು ಇಂದು ಸಂಪರ್ಕ ಸಾಧನೆಗಳು ಹೆಚ್ಚಾಗಿವೆ, ಆದರೆ ಮಾನವೀಯ ಸಂಬಂಧಗಳು ಕಡಿಮೆಯಾಗುತ್ತಿವೆ. ತತ್ಕಾಲ ಸುಖ ಮತ್ತು ಪ್ರಸಿದ್ಧಿ ಕೊಡುವ ವಾಟ್ಸಪ್, ಫೇಸ್‍ಬುಕ್ ಗಳಿಗಿಂತ ಮುದ್ರಣ ಸಾಹಿತ್ಯ ಕೈಗೆ ಸಿಗಬೇಕು.

     ಇದಕ್ಕಾಗಿ ಸಂಕ್ರಮಣ ಸಾಹಿತ್ಯ ಬಳಗ ನಾಡಿನಲ್ಲಿ ಹೊಸ ಹಾಗೂ ದೊಡ್ಡ ವೇದಿಕೆಯಾಗಲಿದೆ ಎಂದರು. ರಾಜ್ಯದ 31 ಜಿಲ್ಲಾ ಕೇಂದ್ರಗಳಲ್ಲಿ ಬಳಗ ಆರಂಭವಾಗಲಿದ್ದು ಈಗಾಗಲೇ ಗದಗ, ಹಾವೇರಿ ಹಾಗೂ ದಾವಣಗೇರಿಯಲ್ಲಿ ಪ್ರಾರಂಭವಾಗಿವೆ. ಕೇವಲ 10 ಬರಹಗಾರರು ಇದ್ದರೆ ಸಾಕು, ತಿಂಗಳಿಗೊಂದು ಕಾರ್ಯಕ್ರಮ ಜರುಗಿಸಬೇಕು. ಪುಸ್ತಕ ಚರ್ಚೆ, ವಿಮರ್ಶೆ ಹಾಗೂ ಸಮಕಾಲೀನ ಸಾಂಸ್ಕøತಿಕ ಸಂದರ್ಭದ ಬಗ್ಗೆ ಚರ್ಚೆ ನಡೆಯಬೇಕೆಂದು ವಿವರಿಸಿದರು.

     ಬಹು ಮುಖ್ಯವಾಗಿ ಯುವ ಬರಹಗಾರರ ಪುಸ್ತಕಗಳ ಪ್ರಕಟಣೆ ಮತ್ತು ವಿತರಣೆ ವ್ಯವಸ್ಥೆಯನ್ನು ಸಂಕ್ರಮಣ ಸಾಹಿತ್ಯ ಬಳಗ ವಹಿಸಿ ಕನಿಷ್ಠ 300 ಪ್ರತಿಗಳನ್ನು ನಾಡಿನ ಎಲ್ಲ ಘಟಕಗಳಿಗೆ ಮಾರಾಟದ ರೂಪದಲ್ಲಿ ತಲುಪಿಸಲಾಗುವುದೆಂದೂ ಚಂಪಾ ಹೇಳಿದರು. ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಪ್ರಶಸ್ತಿ ಪುರಸ್ಕøತ ಕಲಾವಿದರಾದ ಕರಿಯಪ್ಪ ಹಂಚಿನಮನಿಯವರನ್ನು ಸಂಕ್ರಮಣ ಸಾಹಿತ್ಯ ಬಳಗ ದ ಪರವಾಗಿ ಸನ್ಮಾನಿಸಿದರು.

      ವೇದಿಕೆಯನ್ನು ಉದ್ದೇಶಿಸಿ ಪ್ರೊ. ಧರಣೇಂದ್ರ ಕರಕುರಿ, ಡಾ. ಜೆ. ಜಿ ದೇವಧರ, ಪ್ರಕಾಶ ಮನ್ನಂಗಿ, ಶ್ರೀಮತಿ ರೇಣುಕಾ ಗುಡಿಮನಿ, ವಾಯ್, ಬಿ ಆಲದಕಟ್ಟಿ ಹಾಗೂ ಸಿದ್ದಾಪುರದ ಗಂಗಾಧರ ಕೊಳಗಿ ಮಾತನಾಡಿದರು. ಸಮಾರಂಭದಲ್ಲಿ ಡಾ. ವ್ಹಿ ಪಿ ದ್ಯಾಮಣ್ಣನವರ, ಸಿ ಆರ್ ಮಾಳಗಿ, ಶ್ರೀಮತಿ ಪರಿಮಳಾ ಜೈನ, ಸಿದ್ದುಮತಿ ನೆಲವಿಗಿ, ಮಲ್ಲಿಕಾರ್ಜುನ ಹಿಂಚಿಗೇರಿ, ಸಿ ಎ ಕೂಡಲಮಠ, ಎಸ್ ಆರ್ ಹಿರೇಮಠ, ಸಿ. ಎಸ್. ಮರಳೀಹಳ್ಳಿ, ವ್ಹಿ. ಎಮ್ ಪತ್ರಿ ಮಾಲತೇಶ ಅಂಗೂರ, ಜಿ. ಎಮ್. ಓಂಕಾರಣ್ಣನವರ ಮುಂತಾದವರು ಪಾಲ್ಗೊಂಡಿದ್ದರು.
ಸಂಕ್ರಮಣ ಸಾಹಿತ್ಯ ಬಳಗ ದ ಸಂಚಾಲಕರನ್ನಾಗಿ ಕೃಷ್ಣ ಜವಳಿ, ವಾಗೀಶ ಹೂಗಾರ ಹಾಗೂ ಪುಷ್ಪಾ ಶಲವಡಿಮಠ ಅವರನ್ನು ಆಯ್ಕೆ ಮಾಡಲಾಯಿತು. ಆರಂಭದಲ್ಲಿ ಲೇಖಕಿ ರಾಜೇಶ್ವರಿ ಸಾರಂಗಮಠ ಸ್ವಾಗತಿಸಿದರು, ಪೃಥ್ವಿರಾಜ ಬೆಟಗೇರಿ ನಡೆಸಿದರು. ವಾಗೀಶ ಹೂಗಾರ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link