ದಾವಣಗೆರೆ:
ವೀರಶೈವ-ಲಿಂಗಾಯತರ ಬಗ್ಗೆ ಅಸಂಸದೀಯ ಪದ ಬಳಿಸಿರುವುದಲ್ಲದೇ, ಹಲವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿರುವ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ, ತಕ್ಷಣವೇ ಅಟ್ರಾಸಿಟಿ ಪ್ರಕರಣ ವಾಪಾಸ್ ಪಡೆಯುವುದರ ಜೊತೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಮಾಜಿ ಶಾಸಕ, ಬಂಜಾರ ಸಮುದಾಯದ ಮುಖಂಡ ಎಂ.ಬಸವರಾಜ ನಾಯ್ಕ ಒತ್ತಾಯಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ವೈ.ರಾಮಪ್ಪನವರು ಅಸಂಸದೀಯ ಪದಗಳನ್ನು ಬಳಸಿ, ವೀರಶೈವ-ಲಿಂಗಾಯತ ಸಮಾಜದವರ ಅವಹೇಳನ ಮಾಡಿರುವ ಕಾರಣಕ್ಕೆ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಬಿರುಗಾಳಿಯೇ ಎದ್ದಂತಾಗಿ, ಸಾರ್ವಜನಿಕರ ನಿದ್ದೆಗೆಡಿಸುವಂತೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲ ಸಮುದಾಯಗಳನ್ನು ಜೊತೆಗೆ ಕೊಂಡ್ಡೊಯ್ಯುವ ವೀರಶೈವ-ಲಿಂಗಾಯತ ಧರ್ಮಮದ ಮಠಮಾನ್ಯಗಳು ಆರಂಭಿಸಿದ ಶಿಕ್ಷಣ ಸಂಸ್ಥೆಯಲ್ಲಿ ನಾನು ಸೇರಿದಂತೆ ಹಲವರು ಶಿಕ್ಷಣ ಪಡೆದು, ಇಂದು ನಮ್ಮಂತಹ ತಳ ಸಮುದಾಯದವರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವಂತಾಗಿದೆ.
ಸಮಾಜಕ್ಕೆ ಅಷ್ಟು ದೊಡ್ಡ ಕೊಡುಗೆ ನೀಡಿರುವ ವೀರಶೈವ-ಲಿಂಗಾಯತರ ಬಗ್ಗೆ ಅಸಂಸದೀಯ ಪದಗಳನ್ನು ಬಳಕೆ ಮಾಡುವ ಮೂಲಕ ಒಂದು ದೊಡ್ಡ ಕೋಮನ್ನು ನಿಂದಿಸಿರುವುದು, ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡಲು ಅರ್ಹತೆ ಇಲ್ಲದವ, ಡಿಗ್ರಿ ಕಾಲೇಜಿನ ಪ್ರಾಂಶುಪಾಲರ ಬಗ್ಗೆ ಮಾತನಾಡಿದಂತಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ರಾಮಪ್ಪ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುದೇಗೌಡ್ರ ಗಿರೀಶ್, ಶಿವಗಂಗಾ ಬಸವರಾಜ್, ಪವಾಡರಂಗ್ಗವ್ವನಹಳ್ಳಿ ಉಮೇಶ್, ಕುರುಡಿ ಬಣಕಾರ್, ಲೋಕಿಕೆರೆ ನಾಗರಾಜ್, ಹೊನ್ನೂರು ಮುನಿಯಪ್ಪ, ಹೆಮ್ಮನಬೇತೂರು ಶಶಿಧರ್, ಕಾಶೀಪುರ ಸಿದ್ದೇಶ್ ಸೇರಿದಂತೆ ಅವರ ವಿರುದ್ಧ ರಾಮಪ್ಪನವರು ಜಾತಿ ನಿಂದನೆ ಪ್ರಕರಣ ದಾಖಲಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ.
ಹೀಗೆ ಯಾರೋ ಒಬ್ಬರು ಅಟ್ರಾಸಿಟಿ ಕಾಯಿದೆಯನ್ನು ದುರುಪಯೋಗ ಪಡೆಸಿಕೊಂಡರೇ, ಇಡೀ ದಲಿತ ಸಮುದಾಯಕ್ಕೆ ಕೆಟ್ಟ ಹೆಸರು ಬರುವ ಕಾರಣಕ್ಕೆ ಪ್ರತಿಯೊಂದಕ್ಕೂ ಅಟ್ರಾಸಿಟಿ ಅಸ್ತ್ರ ಪ್ರಯೋಗಿಸುವುದು ಸಮಂಜಸವಲ್ಲ ಎಂದರು.ರಾಮಪ್ಪನವರೇನೊ ವೀರಶೈವ-ಲಿಂಗಾಯತ ಸಮಾಜ ಬಾಂಧವರ ಬಗ್ಗೆ ಅವಹೇಳನ ಮಾಡಿಬಿಟ್ಟಿದ್ದಾರೆ. ಆದರೆ, ಅವರ ಹಿಮ್ಮೇಳದಲ್ಲಿರುವ ಅಮಾಯಕ ಜನರ ಸ್ಥಿತಿ ಏನಗಬಹುದು ಎಂಬುದನ್ನು ಅರಿತು ಮಾತನಾಡಬೇಕೆಂದು ಸಲಹೆ ನೀಡಿದರು.
ಕುರುಬ ಸಮಾಜದ ಮುಖಂಡ, ಗ್ರಾ.ಪಂ. ಸದಸ್ಯ ಅಣಬೇರು ಶಿವಮೂರ್ತಿ ಮಾತನಾಡಿ, ರಾಮಪ್ಪನವರು ಅಹಿಂದ ಕ್ರಾಂತಿ ಮೊಳಗಲಿದೆ ಎಂದಿದ್ದಾರೆ. ನಾವೇನು ಕಾಂಗ್ರೆಸ್‍ನವರಿಗೆ ಹಾಗೂ ರಾಮಪ್ಪನವರಿಗೆ ಅಹಿಂದ ವರ್ಗವನ್ನು ಗುತ್ತಿಗೆಗೆ ಕೊಟ್ಟಿಲ್ಲ. ಹೀಗೆ ಅಹಿಂದ ವರ್ಗಗಳ ಹೆಸರನ್ನು ಬಳಸಿಕೊಂಡು ಸಮಾಜದಲ್ಲಿ ವಿಷಬೀಜ ಬಿತ್ತುವುದು ಒಳ್ಳೆಯ ಬೆಳವಣಿಗೆಯಲ್ಲ. ಅವರ ಬಾಯಿ ಚಪಲಕ್ಕೆ ಅಹಿಂದ ಹೆಸರು ಬಳಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ಛಲವಾದಿ ಸಮಾಜದ ಮುಖಂಡ ಹೆಚ್.ಕೆ.ಬಸವರಾಜ್ ಮಾತನಾಡಿ, ಮುಂದೆ ಎಲ್ಲರೂ ಸಾಮರಸ್ಯದಿಂದ ಜೀವನ ಸಾಗಿಸುವ ವಾತಾವರಣ ನಿರ್ಮಾಣವಾಗಬೇಕಾದರೆ, ಲಿಂಗಾಯತ ಸಮುದಾಯದವರ ಕ್ಷಮೆಯಾಚಿಸುವ ಮೂಲಕ ಅಹಿಂದ ಸಮುದಾಯಕ್ಕೆ ಗೌರವ ತಂದುಕೊಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹನುಮಂತ ನಾಯ್ಕ, ಹಿಂಡಸಗಟ್ಟೆ ಮಹಾಬಲೇಶ್ವರ, ಐಗೂರು ಗೊಲ್ಲರಹಟ್ಟಿ ತಿಪ್ಪೇಸ್ವಾಮಿ, ಶ್ಯಾಗಲೆ ಮಂಜಪ್ಪ, ಮಳ್ಳೆಕಟ್ಟೆ ನಾಗರಾಜ್, ಆಲೂರು ಚನ್ನಬಸಪ್ಪ, ಆನಗೋಡು ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.