ಸದಾಶಿವ ವರದಿ ಜಾರಿಗಾಗಿ ಅ.1ರಂದು ತಮಟೆ ಚಳವಳಿ

ದಾವಣಗೆರೆ:

      ಚುನಾವಣೆ ಪೂರ್ವದಲ್ಲಿ ಜೆಡಿಎಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಸಚಿವ ಸಂಪುಟದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅನುಮೋದಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿ, ಅಕ್ಟೋಬರ್ 1ರಂದು ನಗರದಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ (ಡಿಎಸ್4) ನೇತೃತ್ವದಲ್ಲಿ ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ ತಿಳಿಸಿದರು.

       ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಮಟೆ ಚಳವಳಿ ಆರಂಭಿಸಿ, ಜಿಲ್ಲಾಡಳಿತ ಭವನಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

       ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ವರ್ಗೀಕರಣ ಮಾಡಿ, ಸಮಾಜಿಕನ್ಯಾಯ ಕಲ್ಪಿಸಬೇಕೆಂದು ಆಗ್ರಹಿಸಿ ಸುಮಾರು 25 ವರ್ಷಗಳ ಕಾಲ ಹೋರಾಟ ಮಾಡಿದ್ದರ ಫಲವಾಗಿ ರಾಜ್ಯ ಸರ್ಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿತ್ತು. ಈ ಸಮಿತಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಮಾದಿಗ ಸಮುದಾಯದ ಜನರ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ಅಲ್ಲಿಂದ ಇಲ್ಲಿಯ ವರೆಗೂ ಅಧಿಕಾರ ನಡೆಸಿದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ, ಬಿಜೆಪಿ ಸರ್ಕಾರ ಹಾಗೂ ಕಾಂಗ್ರೆಸ್ ಸರ್ಕಾರಗಳು ಈ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿಲ್ಲ ಎಂದು ಆರೋಪಿಸಿದರು.

       ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ, ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಈಗ ಕಾಂಗ್ರೆಸ್ ಸಹಕಾರದೊಂದಿಗೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯೂ ಆಗಿದ್ದಾರೆ. ಆದರೆ, ಈ ಬಗ್ಗೆ ಹೆಚ್‍ಡಿಕೆ ಚಕಾರವೇ ಎತ್ತುತ್ತಿಲ್ಲ. ರೈತರ ಸಾಲ ಮನ್ನಾದ ಗೋಜಿನಲ್ಲಿಯೇ ಸಿಲುಕಿರುವ ಅವರು ದಲಿತರನ್ನು ಮರೆತುಬಿಟ್ಟಿದ್ದಾರೆಂದು ಆಪಾದಿಸಿದರು.

        ದಲಿತರಲ್ಲಿಯೇ ಅಸ್ಪøಶ್ಯರಾಗಿರುವ ಹೊಲೆ ಮಾದಿಗರಿಗೆ ಸಾಮಾಜಿಕ ನ್ಯಾಯಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಕ್ಷಣವೇ ಮುಖ್ಯಮಂತ್ರಿಗಳು ಸದಾಶಿವ ಆಯೋಗದ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಎಸ್‍ಸಿಪಿ-ಟಿಎಸ್‍ಪಿ ಕಾಯ್ದೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟಿರುವ ಹಣವನ್ನು ಪರಿಶಿಷ್ಟ ಅಭಿವೃದ್ಧಿಗಾಗಿಯೆ ಬಳಸಬೇಕು. ಭೂರಹಿತ ದಲಿತರಿಗೆ ಭೂಮಿ ವಿತರಸಬೇಕು. ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದ ಜಾನಕಮ್ಮ ಅವರನ್ನು ಜೀತ ಮಾಡಿಸಲು ಒತ್ತಾಯ ಪೂರ್ವಕವಾಗಿ ಕಾರಿನಲ್ಲಿ ಹೊತ್ತೊಯ್ದು ಚಿತ್ರಹಿಂಸೆ ನೀಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

       ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ.ಬಸವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷ ನೋಟದವರ್, ಎಸ್.ಹೆಚ್.ಶಾಂತರಾಜ್, ಕೆ.ಸಿ.ಮೂರ್ತಿ ಬೆಳ್ಳಿಗನೂಡು, ಡಿ.ಡಿ.ಹನುಮಂತಪ್ಪ, ಎಲ್.ಜಯಪ್ಪ, ನಾಗಲಿಂಗಪ್ಪ, ಕಾರಿಗನೂರು ನಾಗರಾಜ್, ತಲವಾಗಲು ಕರಿಯಪ್ಪ, ಕೃಷ್ಣಪ್ಪ ನವಿಲೇಹಾಳ್, ಕೆ.ಎಂ.ವಾಗೀಶಯ್ಯ, ಮಂಜುನಾಥ್, ಗೋವಿಂದರಾಜ್, ತಿಪ್ಪೇಶ್ ಕುಳಗಟ್ಟೆ, ಪರಮೇಶ್ವರಪ್ಪ, ಹೊಳೆಸಿರಗೆರೆ ವಿನಾಯಕ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap