ಬೆಂಗಳೂರು
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಸತಿ ಯೋಜನೆ ಸಂಪೂರ್ಣವಾಗಿ ಹಾದಿ ತಪ್ಪಿದ್ದು,ವಸತಿ ಯೋಜನೆಗಳಿಗೆ 15 ದಿನಗಳಲ್ಲಿ ಹಣ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳ ಲಾಗುವುದು ಎಂದು ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್‌ಖಂಡ್ರೆ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಗುಡಿಸಲು ಮುಕ್ತ ರಾಜ್ಯ ನಿರ್ಮಾಣ ಮಾಡುವುದಾಗಿ ಹೇಳಿದ್ದ ಬಿಜೆಪಿ, ವಸತಿರಹಿತರಿಗೆ ಸಮರ್ಪಕವಾದ ಸೂರು ನೀಡುವಲ್ಲಿ ನಿರ್ಲಕ್ಷ್ಯ ತಾಳಿದೆ. ಇದು ಅಕ್ರಮಕ್ಕೆ ಅವಕಾಶ ನೀಡಿದಂತಾಗುತ್ತದೆ ನೆರವಿಲ್ಲದೇ ಮನೆಗಳ ನಿರ್ಮಾಣ ಸ್ಥಗಿತಗೊಂಡಿದ್ದು ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಅನಿವಾರ್ಯ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ವಸತಿ ಯೋಜನೆಗೆ 6 ಸಾವಿರ ಕೋಟಿ ರೂ. ಹಣ ಮೀಸಲಿಟ್ಟಿದ್ದು, ಆರ್ಥಿಕ ಇಲಾಖೆಯಿಂದ ಮಂಜೂರಾತಿಯನ್ನು ನೀಡಿ ಜನರಿಗೆ ವಿತರಿಸಲಾಗಿತ್ತು. ಆದರೆ, ಬಿಜೆಪಿ ವಸತಿರಹಿತರಿಗೆ ಮನೆ ನೀಡುವುದಾಗಿ ಭರವಸೆ ನೀಡಿ ಇಲ್ಲಿಯವರೆವಿಗೂ ಯಾವುದೇ ಕಾರ್ಯಗಳನ್ನು ಕೈಗೊಳ್ಳದೆ ನಿರ್ಲಕ್ಷಿಸಿರುವುದು ಬಡವರು ಬೀದಿ ಪಾಲಾಗಲು ಕಾರಣವಾಗಿದೆ ಎಂದರು.
ಬಸವ, ಅಂಬೇಡ್ಕರ್ ಹಾಗೂ ವಾಜಪೇಯಿ ವಸತಿ ಯೋಜನೆಗೆ 16,38,564 ಕೋಟಿ ರೂ. ಹಣ ನೀಡುವ ಗುರಿ ಹೊಂದಲಾಗಿತ್ತು. ಇದರಲ್ಲಿ 13,97,115 ಕೋಟಿ ರೂ.ಗಳಿಗೆ ವರ್ಕ್ ಆರ್ಡರ್ ನೀಡಲಾಗಿದೆ. ಆದರೆ, ಇಲ್ಲಿಯವರೆವಿಗೆ 7,43,935 ಕೆಲಸಗಳು ಮಾತ್ರ ಮುಗಿದಿದ್ದು, 3,59,919 ಕೆಲಸಗಳು ಪ್ರಗತಿಯಲ್ಲಿವೆ.ನಾಲ್ಕು ಹಂತದಲ್ಲಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದ ಬಿಜೆಪಿ ಸರ್ಕಾರ ಕಳೆದ 8 ತಿಂಗಳಿನಿಂದ 1 ಪೈಸೆಯನ್ನೂ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಇತ್ತೀಚೆಗೆ ವಸತಿ ಸಚಿವ ಸೋಮಣ್ಣನವರು ವಸತಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿ, ಯೋಜನೆಗೆ ಮಂಜೂರಾಗಿದ್ದ ಹಣವನ್ನು ತಡೆ ಹಿಡಿದಿದ್ದಾರೆ. ಒಂದು ವೇಳೆ ಈ ಯೋಜನೆಯಲ್ಲಿ ಅಕ್ರಮ ನಡೆದಿದ್ದೇಯಾದರೆ ಅದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ. ವಿನಾಕಾರಣ ಜನರಿಗೆ ಸತ್ಯಾಂಶ ತಿಳಿಸದೆ ಹಣವನ್ನು ಮಂಜೂರು ಮಾಡದಿದ್ದರೆ ಈಗಾಗಲೇ ಅರ್ಧ ಮನೆ ಕಟ್ಟಿಕೊಂಡು ಸಂಕಷ್ಟದಲ್ಲಿರುವ ಜನರು ಬೀದಿ ಪಾಲಾಗುವ ಸಂಭವ ಹೆಚ್ಚು. ಆದ್ದರಿಂದ ಕೂಡಲೇ ಸರ್ಕಾರ ಈ ವಸತಿ ಯೋಜನೆಗಳಿಗೆ ತ್ವರಿತವಾಗಿ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ