ಹಾನಗಲ್ಲ :
ಸರಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು, ಸಾವಯವ ಕೃಷಿಯನ್ನೂ ಒಳಗೊಂಡು ರೈತ ಸಮುದಾಯ ಆರ್ಥಿಕ ಅಭಿವೃದ್ಧಿಗೆ ಮುಂದಾಗಬೇಕಾಗಿದೆ ಎಂದು ಹಾನಗಲ್ಲ ತಹಶೀಲ್ದಾರ ಸಿ.ಎಸ್.ಭಂಗಿ ಕರೆ ನೀಡಿದರು.
ಮಂಗಳವಾರ ಹಾನಗಲ್ಲ ತಾಲೂಕಿನ ಮಾವಕೊಪ್ಪ ಗ್ರಾಮದಲ್ಲಿ ಹಾನಗಲ್ಲ ತಾಲೂಕಾ ರೈತ ಸಂಘ ಹಾಗೂ ಹಸಿರು ಸೇನೆ ಆಯೋಜಿಸಿದ ಬೆಳೆ ಕಟಾವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ಯುಗದಲ್ಲಿರುವ ನಾವು ಕೃಷಿಯಲ್ಲಿಯೂ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ರೈತ ಸಮುದಾಯ ಇಂತಹ ತರಬೇತಿ ಕಾರ್ಯಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ರಾಸಾಯನಿಕ ಗೊಬ್ಬರದ ಬದಲು ಸಾವಯವ ಕೃಷಿಗೆ ಅಧ್ಯತೆ ನೀಡಲು ರೈತರು ಮುಂದಾಗಿರಿ. ಹಸಿರು ರೈತರ ಸಮೃದ್ಧಿಯ ಸಂಕೇತ. ಈ ಮೂಲಕ ಬದುಕನ್ನೂ ಹಸಿರಾಗಿಸಿಕೊಳ್ಳಲು ಮುಂದಾಗಿರಿ.
ಕೃಷಿ ಬದುಕು ಕಟ್ಟಿ ಕೊಡುತ್ತದೆ. ಆದರೆ ಶ್ರದ್ಧೆಯ ದುಡಿಮೆ ಬೇಕಾಗಿದೆ. ಪ್ರಕೃತಿಯ ರುದ್ರ ತಾಂಡವ ಹಲವು ಬಾರಿ ರೈತನ ಬದುಕನ್ನು ಅಸ್ತವ್ಯಸ್ಥಗೊಳಿಸುತ್ತದೆ. ಇದೆಲ್ಲದರ ನಡುವೆಯೂ ಅನ್ನ ನೀಡುವ ರೈತ ಮಾತ್ರ ಎದೆಗುಂದದೇ ತನ್ನ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಮೆಚ್ಚಲೇಬೇಕು ಎಂದರು.
ಅಂಕಿಸಂಖ್ಯೆ ಇಲಾಖೆಯ ಅಧಿಕಾರಿ ಎಚ್.ವಾಯ್.ಮೀಸಿ ಮಾತನಾಡಿ, ಬೆಳೆ ಕಟಾವು ಪ್ರಯೋಗ ಆರು ದಶಕಗಳಿಂದ ನಡೆಯುತ್ತಲೇ ಬಂದಿದೆ. ಆದರೆ ಹತ್ತಾರು ವರ್ಷಗಳಿ ಹಿಂದೆ ಇದು ಕೇವಲ ಆಹಾರ ಉತ್ಪಾದನೆ ಲೆಕ್ಕಾಚಾರಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಬೆಳೆ ವಿಮೆ ಜಾರಿ ಬಂದ ನಂತರ ಇದರ ಸ್ವರೂಪ ಬದಲಾಗಿದೆ. ವಿಮಾ ಕಂಪನಿಯೂ ಒಳಗೊಂಡು ಕಂದಾಯ, ಕೃಷಿ, ತೋಟಗಾರಿಕೆ, ಸಾಂಖಿಕ ಇಲಾಖೆಗಳು ಒಟ್ಟಾಗಿ ಈ ಕಾರ್ಯವನ್ನು ಕೈಗೊಳ್ಳುತ್ತವೆ. ಹಿಂಗಾರು ಮುಂಗಾರು ಬೆಳೆ ಕಟಾವು ಮೂಲಕ ಬೆಳೆ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರ್ಯಾಂಡಮ್ ರೀತಿಯಲ್ಲಿ ಬೆಳೆ ಬಗೆಗೆ ಪಾರದರ್ಶಕವಾಗಿ ಲೆಕ್ಕಾಚಾರ ಮಾಡಲಾಗುತ್ತದೆ ಎಂದರು.
ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ವಾಯ್.ಶ್ರೀಧರ ಮಾತನಾಡಿ, ಈ ಬಾರಿ ಬೆಳೆ ಸಮೀಕ್ಷೆ ಮುಗಿದಿದ್ದು ಇದರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಈಗ ಹೊಸ ತಂತ್ರಾಶದ ಬೆಳೆದರ್ಶಕ ಲಭ್ಯವಿದೆ. ಈ ತಂತ್ರಾಶದ ಮೂಲಕ ಬೆಳೆ ನಮೂದಿಯಲ್ಲಿ ತಪ್ಪಾಗಿದ್ದರೆ ಅದನ್ನು ಮರುಪರಿಶೀಲನೆ ಮಾಡುವ ಒಳ್ಳೆಯ ತಂತ್ರಾಂಶವಾಗಿದೆ ಎಂದರು.
ತೋಟಗಾರಿಕೆ ಇಲಾಖೆಯ ಅಧಿಕಾರಿ ಮಂಜುನಾಥ ಬಣಕಾರ ಮಾತನಾಡಿ, ಮಾವು ಬೆಳೆ ವಿಮೆ ಭರಿಸಲು ನವೆಂಬರ್ 15 ಕೊನೆ ದಿನವಾಗಿದ್ದು ಮಾವು ಬೆಳೆಗಾರರು ಸಕಾಲಿಕವಾಗಿ ಭರಿಸಬೇಕು. ಮಾಸನಕಟ್ಟಿ ಪಂಚಾಯತಿಯ ಮಾವು ಬೆಳೆ ಬಂಕಾಪುರ ವ್ಯಾಪ್ತಿಗೆ ಸೇರಿದ್ದು, ಅದನ್ನು ಬಮ್ಮನಹಳ್ಳಿ ಹೋಬಳಿಗೆ ಸೇರಿಸಲು ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಮಾಲತೇಶ ಪರಪ್ಪನವರ, ರುದ್ರಪ್ಪ ಅಣ್ಣಿ, ರಾಜು ದಾನಪ್ಪನವರ, ಸೋಮಣ್ಣ ಜಡೆಗೊಂಡರ, ಸುಬಾಸಚಂದ್ರ ತಳವಾರ, ಹಸನಸಾಬ ಮುಲ್ಲಾ, ಶಂಕ್ರಪ್ಪ ಅಸುಂಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಾದ ಭಾರತಿ, ಮುಸ್ತಾಕ ಅಗಸರ, ಪುಟ್ಟಪ್ಪ ಕೋಳೂರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








