ಪುರದಮಠದಲ್ಲಿ ಸಂಜೆಯವರೆಗೂ ನಡೆದ ಮುದ್ದೆ ಸಾರಿನ ಸಂತರ್ಪಣೆ

ಹುಳಿಯಾರು:

        ಹೋಬಳಿ ಕೆಂಕೆರೆ ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ಕೃತಿಕಾ ಮಹೋತ್ಸವವು ಸ್ವಾಮಿಯ ಮೂಲಸ್ಥಾನ ಪುರದಮಠದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಸುಮಾರು ಹತ್ತು ಸಾವಿರದಷ್ಟಿದ್ದ ಭಕ್ತರು ಸ್ವಾಮಿಯ ದರ್ಶನ ಪಡೆಯುವುದರ ಜೊತೆಗೆ ರಾಗಿಮುದ್ದೆ ಸಾರಿನ ಸವಿ ಸವಿದರು.

        ಪುರದಮಠದಲ್ಲಿ ಗಂಗಾಸ್ನಾನ ನಡೆಸಿ ಸ್ವಾಮಿಯ ಹಾಗೂ ಬಸವನ ಉತ್ಸವ ನಡೆಸಿ, ತಯಾರಿಸಿದ್ದ ಪ್ರಸಾದವನ್ನು ಸ್ವಾಮಿಯ ಗದ್ದಿಗೆ ಇರುವ ಪುರಾತನ ಗುಹೆಗಳಿಗೆ ತೆಗೆದುಕೊಂಡು ಹೋಗಿ ಎಡೆ ಸಲ್ಲಿಸಲಾಯಿತು. ಮೂಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬಸವನನ್ನು ವಿವಿಧ ಹೂಗಳಿಂದ ಅಲಂಕರಿಸಿ ಉತ್ಸವ ನಡೆಸಿದರಲ್ಲದೆ, ಭಕ್ತರು ಧ್ವಜಕುಣಿಯುವ ಮೂಲಕ ಉತ್ಸವಕ್ಕೆ ರಂಗು ತಂದರು. ನಂತರ ಮಹೊತ್ಸವಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು

        ರಾಗಿ ಮುದ್ದೆ ವಿಶೇಷ: ಪುರದಮಠದಲ್ಲಿ ನಡೆಯುವ ಪುರಾಣಪ್ರಸಿದ್ದ ಚನ್ನಸವಣ್ಣನ ಕಡೇ ಕಾರ್ತೀಕದಲ್ಲಿ ರಾಗಿ ಮುದ್ದೆ ಸಾರಿನ ಊಟ ವಿಶೇಷವಾಗಿದ್ದು ಇಲ್ಲಿಗೆ ಜಿಲ್ಲೆಯ ನಾನಾ ಭಾಗದಿಂದ ಭಕ್ತರು ಆಗಮಿಸುತ್ತಾರೆ. ಅಲ್ಲದೆ ಪುರದಮಠ ಜಿಲ್ಲೆಯ ಗಡಿಭಾಗವಾಗಿರುವುದರಿಂದ ಹೊಸದುರ್ಗ, ಹಿರಿಯೂರು ತಾಲ್ಲೂಕುಗಳ ಅಪಾರ ಸಂಖ್ಯೆಯ ಭಕ್ತರು ಸಹ ಆಗಮಿಸಿ ಸ್ವಾಮಿಯ ದರ್ಶನ ಪಡೆಯುವುದರ ಜೊತೆಗೆ ರಾಗಿಮುದ್ದೆ ಸವಿಯುತ್ತಾರೆ.

       ಈ ರೀತಿ ಮುದ್ದೆ ಊಟ ತಯಾರಿಸುವುದು ಕಳೆದ ಹತ್ತಾರು ದಶಕಗಳಿಂದಲೂ ನಡೆದುಕೊಂಡು ಬಂದಿದ್ದು ಭಕ್ತರು ತಾವು ಬೆಳೆದ ದವಸ ಧಾನ್ಯ, ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಮೀಸಲಾಗಿ ಹಾಕಿರುತ್ತಾರೆ. ಅಲ್ಲದೆ ಕೆಲವರು ಅಕ್ಕಿ, ಬೇಳೆಕಾಳು ಸೇರಿದಂತೆ ಸಾರು ತಯಾರಿಸಲು ಬೇಕಾದ ವಸ್ತುಗಳನ್ನು ಕೊಡಿಸಿರುತ್ತಾರೆ. ಇದನ್ನೆಲ್ಲಾ ಉಪಯೋಗಿಸಿ ಗ್ರಾಮದ ಜನರೆಲ್ಲಾ ಸೇರಿ ರಾಗಿಮುದ್ದೆ ಹಾಗೂ ಹುಳ್ಸೊಪ್ಪು ಕಾಳಿನ ಸಾರು ತಯಾರಿಸಿರುತ್ತಾರೆ.

       40 ಚೀಲ ಅಕ್ಕಿ, 3 ಕ್ವಿಂಟಾಲ್ ರಾಗಿ ಬಳಸಿ ಮುದ್ದೆ, 9 ಕೊಳಗದಷ್ಟು ಸಾಂಬರ್ ಇಂದು ತಯಾರಿಸಲಾಗಿತ್ತು. ಇದನ್ನೇ ಸ್ವಾಮಿಗೆ ನೈವೇದ್ಯವಾಗಿಟ್ಟು ನಂತರ ಭಕ್ತರಿಗೆ ಬಡಿಸುತ್ತಾರೆ. ಅಲ್ಲದೆ ಇಲ್ಲಿ ತಯಾರಿಸುವ ಸಾಂಬಾರನ್ನು ಭಕ್ತರು ತಮ್ಮ ಮನೆಗಳಿಗೆ ಕೊಂಡೊಯ್ಯುವುದು ವಿಶೇಷ. ಮಹೋತ್ಸವದ ನೇತೃತ್ವವನ್ನು ಗ್ರಾಮದ ಸಮಸ್ತ ಯುವಕರು ವಹಿಸಿದ್ದರು.ಸಂಜೆಯವರೆಗೂ ಸಂತರ್ಪಣೆ ನಡೆಯಿತು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link