ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ‘ದಿಶಾ’ ಸಭೆ

ಹಾವೇರಿ

         ಪ್ರಧಾನ ಮಂತ್ರಿ ಗ್ರಾಮೀಣ ಆವಾಸ ಯೋಜನೆಯ ಫಲಾನುಭವಿಗಳಿಗೆ 50 ರಿಂದ 60 ದಿನದೊಳಗಾಗಿ ಆದೇಶ ಪತ್ರ ನೀಡುವ ಕಾರ್ಯವಾಗಬೇಕು ಎಂದು ಸಂಸದ ಶಿವಕುಮಾರ ಉದಾಸಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

         ಶುಕ್ರವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಅವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

          ಈ ಯೋಜನೆಯಡಿ ಫಲಾನುಭವಿಗಳ ನೋಂದಣಿ ಮೊದಲು ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ನಂತರ ಜಿಲ್ಲಾ ಪಂಚಾಯತಿಯಲ್ಲಿ ಆಗಬೇಕು. ಈವರೆಗೆ ಜಿಲ್ಲೆಯಲ್ಲಿ ಎಷ್ಟು ಫಲಾನುಭವಿಗಳ ನೋಂದಣಿಯಾಗಿದೆ? ಈ ಕಾರ್ಯದಲ್ಲಿ ಏಕೆ ವಿಳಂವಾಗುತ್ತಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

           ಗ್ರಾಮ ಪಂಚಾಯತಿಯಲ್ಲಿ 82,096 ಫಲಾನುಭವಿಗಳ ನೋಂದಣಿಯಾಗಿದ್ದು, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಯಲ್ಲಿ ನೋಂದಣಿ ಕಾರ್ಯವಾಗಬೇಕು. ಶೀಘ್ರವಾಗಿ ನೋಂದಣಿ ಕೈಗೊಂಡು ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

          ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ಅಂಚೆ ಇಲಾಖೆ ಮೂಲಕ ಮಾಶಾಸನ ವಿಳಂಬಕ್ಕೆ ಕಾರಣವೇನು, ಅಂಚೆ ಇಲಾಖೆ ಮೂಲಕ ಮಾಶಾಸನ ಪಡೆಯುತ್ತಿರುವ ಸಂಖ್ಯೆ ಎಷ್ಟು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು ಹಾಗೂ ಸಭೆಗೆ ಗೈರು ಹಾಜರಾದ ಅಂಚೆ ಇಲಾಖೆ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡುವಂತೆ ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನಿಯಾರ್ಡ್‍ರ ಮೂಲಕ 1,28,465 ಫಲಾನುಭವಿಗಳು ಹಾಗೂ ಬ್ಯಾಂಕ್ ಮೂಲಕ 32,818 ಫಲಾನುಭವಿಗಳು ಮಾಶಾಸನ ಪಡೆಯುತ್ತಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

        ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಅವರು, ಪ್ರಸಕ್ತ ರಾಜ್ಯದಲ್ಲಿ ಕಂದಾಯ ಇಲಾಖೆಯವರು ಪೋಡಿ ಮುಕ್ತ ಗ್ರಾಮವನ್ನು ಮಾಡಿರುವ ಯೋಜನೆಯಂತೆ ಇ-ಸ್ವತ್ತು ಮುಕ್ತ ಗ್ರಾಮವನ್ನಾಗಿ ಮಾಡುವದಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಸ್ತಾಪಿಸಿದ ಸಂದರ್ಭದಲ್ಲಿ ಸಂಸದರು ಜಿಲ್ಲೆಯನ್ನು ಇ-ಸ್ವತ್ತು ಮುಕ್ತ ಜಿಲ್ಲೆಯನ್ನಾಗಿ ಮಾಡುವುದಕ್ಕೆ ಬೇಕಾದ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿ.ಪಂ ಅಧಿಕಾರಿಗಳಿಗೆ ಸೂಚಿಸಿದರು.

        ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಈ ಯೋಜನೆ ಅನುಷ್ಠಾನಕ್ಕೆ ಅಗತ್ಯ ಸಿಬ್ಬಂಧಿಗಳ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

          ಸರ್ಕಾರ ನೀಡುವ ಪ್ರತಿಯೊಂದು ಯೋಜನೆಗಳಿಗೆ ಇ-ಸ್ವತ್ತು ಕೇಳುತ್ತಾರೆ ಆದರೆ ಬಹುತೇಕ ಗ್ರಾಮಗಳಲ್ಲಿ ಇ-ಸ್ವತ್ತು ಮಾಡಿರುವುದಿಲ್ಲ. ಇದನ್ನು ಪಡೆಯುವದಕ್ಕೆ ಸಾರ್ವಜನಿಕರು ಬಹಳ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಪ್ರಸಕ್ತ ಇ-ಸ್ವತ್ತು ಸಮರ್ಪಕವಾಗಿ ದೊರೆಯದ ಕಾರಣಕ್ಕೆ ಜನತೆ ಅನೇಕ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಗ್ರಾ.ಪಂ ಅಧ್ಯಕ್ಷೆಯೋರ್ವರು ಸಂಸದರ ಗಮನಕ್ಕೆ ತಂದರು.

         ಹೊಂಕಣ ಗ್ರಾ.ಪಂ ಅಧ್ಯಕ್ಷ ಗ್ರಾಮೀಣ ಭಾಗಗಳಲ್ಲಿ ಮನೆ ಮತ್ತು ಕಣ ನಿರ್ಮಾಣ ಮಾಡಿಕೊಳ್ಳಲು ಜಾಗೆಯ ಅಭಾವವಿದೆ, ಗ್ರಾಮದ ಪಕ್ಕದಲ್ಲಿನ ಜಮೀನುಗಳ ರೈತರು 1-2 ಗುಂಟೆ ಜಾಗೆಯನ್ನು ನೀಡುವದಕ್ಕೆ ಸಿದ್ಧರಿದ್ದರೂ ಸಹ ಇಷ್ಟು ಜಾಗೆಯನ್ನು ನೋಂದ ಮಾಡಿಸಿಕೊಳ್ಳುವದಕ್ಕೆ ಅವಕಾಶವಿಲ್ಲದ ಕಾರಣಕ್ಕಾಗಿ ಬಡ ಜನತೆ ನಿವೇಶನಗಳಿಂದ ವಂಚಿತರನ್ನಾಗಿ ಮಾಡಿದೆ. ಆದ್ದರಿಂದ 1-5 ಗುಂಟೆ ಒಳಗಿನ ಜಾಗೆಯನ್ನು ನೋಂದ ಮಾಡುವದಕ್ಕೆ ಅವಕಾಶ ಕಲ್ಪಿಸಿಕೊಡುವದಕ್ಕೆ ಸರ್ಕಾರ ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಜಿ.ಪಂ ಸಿಇಒ ಕೆ.ಲಿಲಾವತಿ ಈ ಕುರಿತು ಸರ್ಕಾರಕ್ಕೆ ಪತ್ರಬರೆಯಲಾಗುವುದು ಎಂದು ಸಭೆಗೆ ತಿಳಿಸಿದರು ಸಂಸದರು ಗ್ರಾಮ ಸಡಕ್ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಕುರಿತಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನೀಡಿದರು.ಸಭೆಯಲ್ಲಿ ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಉಪಕಾರ್ಯದರ್ಶಿ ಗೋವಿಂದಸ್ವಾಮಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link