ಸಾರಿಗೆ ಚೆಕ್ ಪೋಸ್ಟ್ : ರೌಡಿಗಳಿಂದ ಹಫ್ತಾ ವಸೂಲಿ…!!

ಬೆಂಗಳೂರು

       ರಾಜ್ಯಾದ್ಯಂತ ಸಾರಿಗೆ ಇಲಾಖೆಯ ಚೆಕ್‍ಪೋಸ್ಟ್‍ಗಳಲ್ಲಿ ರೌಡಿಗಳ ಮುಖಾಂತರ ಖಾಸಗಿ ವಾಹನಗಳಿಂದ ಹಫ್ತಾ ವಸೂಲು ಕಾರ್ಯ ನಡೆಯುತ್ತಿದೆ ಎಂಬ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ,ಇದನ್ನು ತಡೆಗಟ್ಟಲು ವಿಶೇಷ ಸಂಚಾರಿ ದಳವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ.

       ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಸಾರಿಗೆ ಇಲಾಖೆಯ ಚೆಕ್ ಪೋಸ್ಟ್‍ಗಳಲ್ಲಿ ಆಕ್ರಮ ನಡೆಯದಂತೆ ನೋಡಿಕೊಳ್ಳಲು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಆದರೂ ಹೊರಭಾಗದಲ್ಲಿ ರೌಡಿಗಳ ಮೂಲಕ ಖಾಸಗಿ ವಾಹನಗಳಿಂದ ವಸೂಲಿ ಕಾರ್ಯ ನಡೆಯುತ್ತಿದೆ ಎಂಬ ಆರೋಪಗಳನ್ನು ತಳ್ಳಿ ಹಾಕುವುದಿಲ್ಲ ಎಂದರು.

        ಚೆಕ್ ಪೋಸ್ಟ್‍ಗಳನ್ನು ಹಾದು ಹೋಗುವ ವಾಹನಗಳು ತದನಂತರ ನಿರ್ದಿಷ್ಟ ಜಾಗದಲ್ಲಿ ನಿಂತಿರುವ ರೌಡಿಗಳಿಗೆ ಹಣ ಪಾವತಿ ಮಾಡಬೇಕಾಗುತ್ತದೆ.ಇದೊಂದು ವ್ಯವಸ್ಥಿತ ಜಾಲ.ಹೀಗಾಗಿ ಒಂದೋ ಅವರನ್ನು ಮಟ್ಟ ಹಾಕಿ.ಇಲ್ಲವೇ ಚೆಕ್ ಪೋಸ್ಟ್‍ಗಳನ್ನು ವಿಕೇಂದ್ರಿಕರಣ ಮಾಡಿ ಎಂದು ಸುದ್ದಿಗಾರರು ಹೇಳಿದಾಗ ತಮ್ಮಣ್ಣ ಗಂಭೀರವಾದರು.

       ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು.ಏಕಾಏಕಿಯಾಗಿ ನಾನು ತಡೆಗಟ್ಟುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ.ಆದರೂ ಇದನ್ನು ಕಟ್ಟು ನಿಟ್ಟಾಗಿ ತಡೆಗಟ್ಟಲು ವಿಶೇಷ ಸಂಚಾರಿದಳವನ್ನು ಆರಂಭಿಸುವುದಾಗಿ ಹೇಳಿದರು.

       ಆದಷ್ಟು ಬೇಗ,ಎಷ್ಟೇ ತಡವೆಂದರೂ ಲೋಕಸಭಾ ಚುನಾವಣೆಯ ನಂತರ ವಿಶೇಷ ಸಂಚಾರಿ ದಳವನ್ನು ಆರಂಭಿಸುತ್ತೇವೆ.ರೌಡಿಗಳ ಮುಖಾಂತರ ಚೆಕ್ ಪೋಸ್ಟ್‍ಗಳಲ್ಲಿ ನಡೆಯುತ್ತಿರುವ ವಸೂಲಿ ಕಾರ್ಯವನ್ನು ನಿಲ್ಲಿಸುತ್ತೇವೆ ಎಂದು ವಿವರಿಸಿದರು.

      ರಾಜಧಾನಿಯ ಹೊರವಲಯದಲ್ಲಿ ಚೆಕ್ ಪೋಸ್ಟ್ ಒಂದರಲ್ಲಿ ಖಾಸಗಿ ವಾಹನದ ಮಾಲೀಕರ ವಿರುದ್ಧ ಇದೇ ರೀತಿ ರೌಡಿಗಳು ಹಲ್ಲೆ ಮಾಡಿ,ಮೊಬೈಲ್ ಮತ್ತು ಹಣ ದೋಚಿದ್ದಾರೆ ಎಂಬ ಕುರಿತಂತೆ ಸುದ್ದಿಗಾರರು ವಿವರಿಸಿದಾಗ,ಇದನ್ನೆಲ್ಲ ಇಷ್ಟಕ್ಕೆ ಬಿಡುವುದಿಲ್ಲ ಎಂದರು.

     ಏಳೆಂಟು ಲಕ್ಷ ಕಿಲೋಮೀಟರ್ ದೂರ ಓಡಿದ ಬಸ್ಸುಗಳನ್ನು ಸ್ಕ್ರ್ಯಾಪ್ ಮಾಡುತ್ತಿದ್ದ ಸಾರಿಗೆ ಇಲಾಖೆಯ ಕ್ರಮವನ್ನು ಪರಿಷ್ಕರಿಸಲಾಗಿದ್ದು ಇನ್ನು ಮುಂದೆ ಆರು ಲಕ್ಷ ಕಿಲೋಮೀಟರು ಓಡಿದ ಬಸ್ಸುಗಳ ಎಂಜಿನ್ ರೀ ಬಿಲ್ಡ್ ಮಾಡಿ,ಇನ್ನೂ ಆರೇಳು ಲಕ್ಷ ಕಿಲೋಮೀಟರ್ ಸಂಚರಿಸಲು ಅರ್ಹವಾಗುವಂತೆ ಮಾಡಿ ಎಂದಿರುವುದಾಗಿ ಹೇಳಿದರು.

     ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸುಗಳ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರ ವಿಫಲವಾಗಿದೆ ಎಂಬ
ಆರೋಪಕ್ಕೆ ಉತ್ತರಿಸಿದ ಅವರು,ಅವರೆಷ್ಟು ಪ್ರಭಾವಿಗಳು ಅಂತ ನಿಮಗೆ ಗೊತ್ತಲ್ಲ?ಇಂತಹ ಬಸ್ಸುಗಳು ಪೀಣ್ಯದಿಂದ ಸಂಚರಿಸಬೇಕು ಎಂದು ಬಸ್ ನಿಲ್ದಾಣ ಮಾಡಿಕೊಟ್ಟರೂ ಅವರು ರಾಜಧಾನಿಯ ಒಳಭಾಗದಿಂದ ಸಂಚರಿಸುವುದನ್ನು ಬಿಟ್ಟಿಲ್ಲ ಎಂದರು.

        ಹೀಗಾಗಿ ಹಂತ ಹಂತವಾಗಿ ಅದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುವುದು ಎಂದ ಅವರು,ಅಧಿಕಾರಕ್ಕೆ ಬಂದ ಆರೇಳು ತಿಂಗಳಲ್ಲಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

      ನಿರ್ದಿಷ್ಟ ಜಾಗಕ್ಕೆ ಹೋಗಲು ಅನುಮತಿ ಪಡೆದು ತದ ನಂತರ ಮೂಲ ಉದ್ದೇಶವನ್ನು ಮೀರಿ ನಡೆದುಕೊಳ್ಳುತ್ತಿರುವ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸುಗಳ ಬಗ್ಗೆ ಗೊತ್ತಿದ್ದರೂ ಏಕಾಏಕಿಯಾಗಿ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ವಿವರಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ