ಹೊನ್ನಾಳಿ:
ಕಾರ್ಮಿಕರ ಕಲ್ಯಾಣ ಇಲಾಖೆಯಿಂದ ಸರಕಾರ ಅನೇಕ ಸವಲತ್ತುಗಳನ್ನು ಒದಗಿಸುತ್ತಿದ್ದು, ಅರ್ಹ ಕಾರ್ಮಿಕರು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶ್ರಮಜೀವಿ ಕಟ್ಟಡ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕುಳಗಟ್ಟೆ ಕೋರಿ ಯೋಗೀಶ್ ಹೇಳಿದರು.
“ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆಗಾಗಿ ವಿದ್ಯಾರ್ಥಿಗಳು” ಎಂಬ ಶೀರ್ಷಿಕೆಯಡಿ ಹೊನ್ನಾಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಮಾದನಬಾವಿ ಗ್ರಾಮದಲ್ಲಿ ಎನ್ನೆಸ್ಸೆಸ್ ವಿಶೇಷ ವಾರ್ಷಿಕ ಶಿಬಿರದ ಅಂಗವಾಗಿ ಗುರುವಾರ ಹಮ್ಮಿಕೊಂಡ ಕಾರ್ಮಿಕ ಸಂಘಟನೆ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕರು ಸರಕಾರ ನೀಡುವ ಗುರುತಿನ ಚೀಟಿಗಳನ್ನು ಪಡೆದುಕೊಳ್ಳುವ ಮೂಲಕ ಸರಕಾರದ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರಕಾರ ಧನಸಹಾಯ ಮಾಡುತ್ತದೆ. ಇಬ್ಬರು ಮಕ್ಕಳ ಮದುವೆಗೆ ತಲಾ 50 ಸಾವಿರ ರೂ.ಗಳನ್ನು ನೀಡುತ್ತದೆ. ಕಾರ್ಮಿಕರು ಆಕಸ್ಮಿಕವಾಗಿ ಮರಣ ಹೊಂದಿದರೆ 5 ಲಕ್ಷ ರೂ.ಗಳ ಪರಿಹಾರ, ಅಂಗಹೀನರಾದರೆ 2 ಲಕ್ಷ ರೂ.ಗಳವರೆಗೆ ಪರಿಹಾರ ನೀಡುತ್ತದೆ. ಕಾರ್ಮಿಕರು ಪ್ರತಿ ವರ್ಷ ತಮ್ಮ ಗುರುತಿನ ಚೀಟಿಗಳನ್ನು ನವೀಕರಣ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅನರ್ಹ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಗುವುದಿಲ್ಲ. ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ವಿವರಿಸಿದರು.
ನಿವೃತ್ತ ಪ್ರಾಂಶುಪಾಲ ಪಿ. ಬಸವರಾಜಪ್ಪ, ನಿವೃತ್ತ ಉಪನ್ಯಾಸಕ ಜಿ.ಎಂ. ಷಡಕ್ಷರಪ್ಪ, ಶ್ರಮಜೀವಿ ಕಟ್ಟಡ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಕಡೇಮನಿ, ಶಿಬಿರಾಧಿಕಾರಿ ಎಚ್. ಬಸವರಾಜಪ್ಪ, ಉಪನ್ಯಾಸಕ ಚನ್ನೇಶ್.ಬಿ.ಇದರಮನಿ ಮತ್ತಿತರರು ಮಾತನಾಡಿದರು.
ನಿವೃತ್ತ ಶಿಕ್ಷಕರಾದ ಎ. ಸಿಂಗಪ್ಪ, ಕರೇಗೌಡ್ರ ಶೇಖರಪ್ಪ, ಎಸ್‍ಡಿಎಂಸಿ ಸದಸ್ಯರು, ಗ್ರಾಪಂ ಸದಸ್ಯರು, ರಾಜಪ್ಪ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಮಾದನಬಾವಿ ಗ್ರಾಮದ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳು, ಸಂಗೀತ ಶಿಕ್ಷಕ ಕೊಟ್ರೇಶ್, ಶಿಬಿರಾರ್ಥಿಗಳು ಸಾಂಸ್ಕತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
