ಜಿಲ್ಲೆಯ ಅಭಿವೃದ್ಧಿಗಾಗಿ ಸಿದ್ಧವಾಗಿರುವ ವಿವಿಧ ಯೋಜನೆಗಳು..!!

ತುಮಕೂರು

      ಮುಂದಿನ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಅನೇಕ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಲು ಯೋಜನೆ ರೂಪಿಸಲಾಗಿದ್ದು, ಮುಂದಿನ ಬಜೆಟ್ ಮಂಡನೆಯಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ಕಲ್ಪಿಸಲು ಹಾಗೂ ಜ್ವಲಂತವಾಗಿರುವ ನೀರಾವರಿ ಸಮಸ್ಯೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಪ್ರಸ್ತಾಪ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

       ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ನೀರಾವರಿ ಸಮಸ್ಯೆ ನೀಗಿಸಲು ಬೇಕಾದ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈಗಾಗಲೇ ಎತ್ತಿನ ಹೊಳೆ ಯೋಜನೆಗೆ ಸಾಕಷ್ಟು ಹಣವನ್ನು ಒದಗಿಸಲಾಗಿದೆ. ಬೆಂಗಳೂರು ಜಿಲ್ಲೆಯಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಿದ ಮಾದರಿಯಲ್ಲೇ ಕೊರಟಗೆರೆ ತಾಲ್ಲೂಕಿನಲ್ಲಿ 2500 ಎಕರೆ ಭೂಮಿಯನ್ನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಲಾಗಿದ್ದು, ಅದಕ್ಕೆ ಕುಮಾರಸ್ವಾಮಿಯವರು ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಬರ ಪರಿಸ್ಥಿತಿ ನಿರ್ವಹಣೆಗೆ 50 ಲಕ್ಷ ರೂ.

       ತುಮಕೂರು 11 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ರಾಜ್ಯದ 3ನೇ ದೊಡ್ಡ ಜಿಲ್ಲೆಯಾಗಿದ್ದು, ಎಲ್ಲ ತಾಲ್ಲೂಕಿನಲ್ಲಿಯೂ ಬರ ಘೋಷಿಸಲಾಗಿದೆ. ಬರ ಪರಿಸ್ಥಿತಿಯನ್ನು ಅವಲೋಕಿಸಲು ಮಧುಗಿರಿ, ಪಾವಗಡ, ಶಿರಾ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದು, ಉಳಿದ ತಾಲ್ಲೂಕುಗಳಲ್ಲಿಯೂ ಪ್ರವಾಸ ಮಾಡಲಿದ್ದೇನೆ. ಬರಪರಿಸ್ಥಿತಿ ನಿರ್ವಹಣೆಗಾಗಿ 50 ಲಕ್ಷ ರೂ. ಹಾಗೂ ಕುಡಿಯುವ ನೀರಿನ ನಿರ್ವಹಣೆಗಾಗಿ 50 ಲಕ್ಷ ರೂ. ಸೇರಿದಂತೆ ತಲಾ 1 ಕೋಟಿ ರೂ.ಗಳ ಅನುದಾನ ತುಮಕೂರು ಜಿಲ್ಲೆಯ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆ ಮಾಡಲಾಗಿದೆ. ಸಮಗ್ರ ಕುಡಿಯುವ ನೀರಿನ ನಿರ್ವಹಣೆಗಾಗಿ ಈಗಾಗಲೇ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಗೆ ಹಣ ಜಮಾ ಮಾಡಲಾಗಿದ್ದು, ಬರ ನಿರ್ವಹಣೆಗಾಗಿ ಕ್ರಿಯಾ ಯೋಜನೆ ತಯಾರಿಸಲು ಸೂಚನೆ ನೀಡಲಾಗಿದೆ

ರೈತರಿಗೆ ಆತ್ಮಹತ್ಯೆಯೊಂದೇ ದಾರಿಯಲ್ಲ

      ಪಾವಗಡ ತಾಲೂಕಿನಲ್ಲಿ ಓರ್ವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ವಿಚಾರದ ಬಗ್ಗೆ ಮಾತನಾಡಿದ ಅವರು, ಬೆಳೆ ಸಾಲ ಪಡೆದ ರೈತರಿಗೆ ಆತ್ಮಹತ್ಯೆಯೊಂದೇ ದಾರಿಯಲ್ಲ. ರೈತರ ನೆರವಿಗೆ ಸರ್ಕಾರ ಸದಾ ಸಿದ್ಧವಾಗಿದ್ದು, ರೈತರ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ರಾಜ್ಯ ಸರ್ಕಾರ ಲಕ್ಷಾಂತರ ರೈತ ಬೆಳೆ ಸಾಲ ಮನ್ನಾ ಮಾಡಲಾಗುತ್ತಿದ್ದು, ಯಾವುದೇ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಬಾರದೆಂದು ಮನವಿ ಮಾಡಿದರು.

ಏಷ್ಯಾದಲ್ಲೇ 2ನೇ ಅತಿದೊಡ್ಡ ಕೈಗಾರಿಕಾ ಕ್ಷೇತ್ರ

       ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶ ಏಷ್ಯಾ ಖಂಡದಲ್ಲೇ 2ನೇ ಅತಿ ದೊಡ್ಡ ಕೈಗಾರಿಕಾ ಕ್ಷೇತ್ರವಾಗಿ ಬೆಳೆಯುತ್ತಿದ್ದು, ಪ್ರತಿಷ್ಠಿತ ಕೈಗಾರಿಕೆಗಳು ಸಾವಿರಾರು ಕೋಟಿ ರೂ.ಗಳ ಬಂಡವಾಳ ಹೂಡುತ್ತಿವೆ. ಮುಂದಿನ ಆರು ತಿಂಗಳಲ್ಲಿ ಜಪಾನೀಸ್ ಟೌನ್‍ಶಿಪ್, ಶಾಲಾ ಕಾಲೇಜುಗಳು, ಮನರಂಜನಾ ಕೇಂದ್ರ, ಶಾಪಿಂಗ್ ಮಾಲ್, ಕನ್‍ವೆನ್ಷನ್ ಕೇಂದ್ರ ಸೇರಿದಂತೆ ತುಮಕೂರು ಮೆಷಿನ್ ಟೂಲ್ಸ್ ಸಂಸ್ಥೆ ನಿರ್ಮಾಣ ಕಾಮಗಾರಿಗಳು ಪ್ರಾರಂಭವಾಗುತ್ತವೆ. ಅಲ್ಲಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ನೀಡಲು ಕೈಗಾರಿಕೋದ್ಯಮಿಗಳೊಂದಿಗೆ ಚರ್ಚಿಸಲಾಗುವುದು. ಮುಂದಿನ ವಾರದಲ್ಲಿ ಸಭೆ ಕರೆಯಲು ಸೂಚಿಸಲಾಗಿದೆ.

ತುಮಕೂರಿಗೆ ಪ್ರತ್ಯೇಕ ರೈಲು ಮಾರ್ಗ

     ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಬರ್-ಬನ್ ರೈಲು ಮಾರ್ಗ ನಿರ್ಮಾಣಕ್ಕಾಗಿ ರೈಲ್ವೆ ಇಲಾಖೆಯೊಂದಿಗೆ ಚರ್ಚಿಸಲಾಗಿದೆ. ಮೀರಜ್-ಬಾಂಬೆ-ಪೂನಾ ಮಾರ್ಗವನ್ನು ಹೊರತುಪಡಿಸಿ ಬೆಂಗಳೂರು-ತುಮಕೂರಿಗೆ ಪ್ರತ್ಯೇಕ ಸಬರ್-ಬನ್ ರೈಲು ಮಾರ್ಗ ನಿರ್ಮಾಣ ಮಾಡಲು ಡಿಪಿಆರ್‍ನಲ್ಲಿ ಸೇರಿಸಲಾಗಿದ್ದು, ಬೆಂಗಳೂರು ಹಾಗೂ ತುಮಕೂರಿನಲ್ಲಿ ಏಕಕಾಲದಲ್ಲಿ ಸಬರ್‍ಬನ್ ರೈಲು ಮಾರ್ಗ ಪ್ರಾರಂಭಕ್ಕೆ ಚಿಂತನೆ ನಡೆಸಲಾಗಿದೆ. ಅಲ್ಲದೆ ಬೆಂಗಳೂರಿನಿಂದ ತುಮಕೂರಿನವರೆಗೆ ಮೆಟ್ರೋ ರೈಲು ಸಂಚಾರ ಯೋಜನೆಗೆ ಬೇಡಿಕೆಯಿಟ್ಟಿದ್ದು, ರೈಲ್ವೆ ಇಲಾಖೆ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿಯಡಿಯಲ್ಲಿ ವಿವಿಧ ಕಾಮಗಾರಿಗಳು

       ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ತಲಾ ಶೇಕಡಾ 50ರಂತೆ ಅನುದಾನ ಒದಗಿಸಲಾಗಿರುವ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ತುಮಕೂರು ಬದಲಾವಣೆ ಕಾಣಲಿದೆ. ಅಲ್ಲದೆ ಪಾಲಿಕೆಗೆ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿದ್ದು, ಸ್ಮಾರ್ಟ್ ಸಿಟಿಗೂ ಓರ್ವ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು.

ತ್ಯಾಜ್ಯದಿಂದ ವಿದ್ಯಚ್ಛಕ್ತಿ ಉತ್ಪಾದನೆ

      ಜರ್ಮನ್ ಹಾಗೂ ಫ್ರಾನ್ಸ್ ದೇಶಗಳಿಗೆ ಭೇಟಿ ನೀಡಿ, ತ್ಯಾಜ್ಯದಿಂದ ವಿದ್ಯುಚ್ಛಕ್ತಿ ಉತ್ಪಾದನೆ ಮಾಡುವ ಘಟಕ ಸ್ಥಾಪನೆ ಬಗ್ಗೆ ಅಧ್ಯಯನ ನಡೆಸಲಾಗಿದೆ. ಬೆಂಗಳೂರಿನಲ್ಲಿ 6 ಕಡೆ ಘಟಕ ಸ್ಥಾಪನೆಗಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ತುಮಕೂರು ನಗರದಲ್ಲಿ ಪ್ರಸ್ತುತ 150 ಟನ್ ಕಸ ಉತ್ಪಾದನೆಯಾಗುತ್ತಿದ್ದು, ಇನ್ನೆರಡು ತಿಂಗಳಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿರುವ ಅಜ್ಜಗೊಂಡನಹಳ್ಳಿಯಲ್ಲಿ 500 ಟನ್ ತ್ಯಾಜ್ಯವನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಸಾಮಥ್ರ್ಯದ 1 ಘಟಕವನ್ನು ಸ್ಥಾಪಿಸಲು ಉದ್ದೇಶಿಸಿಸಲಾಗಿದೆ. ಇದರಿಂದ ದೊರೆಯುವ ಶೇ.5ರಷ್ಟು ಬೂದಿಯನ್ನು ಸಿಮೆಂಟ್‍ನೊಂದಿಗೆ ಬೆರೆಸಿ ಕಟ್ಟಡ ನಿರ್ಮಾಣಕ್ಕೆ ಬಳಸಬಹುದಾಗಿದೆ.

ಇಸ್ರೇಲ್ ಮಾದರಿ ಕೃಷಿಗೆ ಕ್ರಮ

      ಜಿಲ್ಲೆಯಲ್ಲಿ ಮುಕ್ಕಾಲು ಭಾಗ ಒಣಪ್ರದೇಶ ಇರುವುದರಿಂದ ಕಡಿಮೆ ನೀರಿನಲ್ಲಿ ಹೆಚ್ಚಿನ ಬೆಳೆ ಬೆಳೆಯುವಂತ ಇಸ್ರೇಲ್ ಮಾದರಿಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link