ಬೆಂಗಳೂರು
ಸಂಕ್ರಾಂತಿ ಮಾಡಲು ಹೋದ ಬಿಜೆಪಿಗೆ ಸಂಭ್ರಾಂತಿ ಆಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ನೂತನ ಸಂಸದೀಯ ಕಾರ್ಯದರ್ಶಿಗಳ ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಸಂಕ್ರಾಂತಿ ಮಾಡಲು ಹೋದ ಬಿಜೆಪಿ ನಾಯಕರಿಗೆ ಸಂಭ್ರಾಂತಿ ಆಗಿದೆ. ಜನವರಿ 14ರ ನಂತರ ಏನೋ ಆಗಿಯೇ ಬಿಡುತ್ತದೆ ಎಂದು ಕೆಲ ಮಾಧ್ಯಮಗಳ ಮೂಲಕ ಅಂತಿಮ ಗಡುವು ನೀಡಿದ್ದರು. ಆದರೆ, ಈಗ ಏನಾಯಿತು ಎಂದು ಪ್ರಶ್ನಿಸಿದರು.
ತಾವು ಪುತ್ರನೊಡನೆ ಹೊಸ ವರ್ಷಾಚರಣೆಗೆ ವಿದೇಶಕ್ಕೆ ಹೋಗಿದ್ದು ತಪ್ಪು. ರಾಜ್ಯ ಬರಗಾಲದಲ್ಲಿದೆ. ಜನರ ಕಷ್ಟ ನಿವಾರಣೆ ಮಾಡುವ ಬದಲು ವಿದೇಶಕ್ಕೆ ಹೋಗಿ ಮೋಜು-ಮಸ್ತಿ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಯಾವುದೇ ಜವಾಬ್ದಾರಿ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಬಾಯಿಗೆ ಬಂದಂತೆ ಟೀಕೆ ಮಾಡಿದ್ದರು.
ಕಳೆದ ಆರು ದಿನಗಳಿಂದ ಹರಿಯಾಣದ ಗುರುಗ್ರಾಮದಲ್ಲಿ ಎಲ್ಲ ಶಾಸಕರನ್ನು ಕರೆದುಕೊಂಡು ಹೋಗಿ ಕೂತಿರುವ ಅವರು, ಅಲ್ಲೇನು ಬರ ಅಧ್ಯಯನ ಮಾಡುತ್ತಿದ್ದಾರಾ? ರಾಜ್ಯದ ಜನರ ಕಷ್ಟ ಮಾಯವಾಯಿತೇ ಎಂದು ತಿರುಗೇಟು ನೀಡಿದರು.
ಮೈತ್ರಿ ಸರ್ಕಾರದ ಮೇಲೆ ಆರೋಪ ಮಾಡುವ ಯಡಿಯೂರಪ್ಪ ಹಾಗೂ ಬಿಜೆಪಿ ಶಾಸಕರ ನಡುವೆ ಏನೋ ಗೊಂದಲ ಇದೆ. ಬಿಜೆಪಿ ನಾಯಕರು ಹೇಳಿದಂತೆಲ್ಲ ಜನರು ತಲೆದೂಗುವುದಿಲ್ಲ ಎಂದು ಬಿಎಸ್‍ವೈ ವಿರುದ್ಧ ವಾಗ್ದಾಳಿ ನಡೆಸಿದರು.
ಇತ್ತೀಚೆಗೆ ರೆಸಾರ್ಟ್ ರಾಜಕೀಯದ ಪ್ರವೃತ್ತಿ ಶುರುವಾಗಿದ್ದು, ತಾವು ತಮ್ಮ ಶಾಸಕರನ್ನು ರೆಸಾರ್ಟ್‍ನಲ್ಲಿ ಇಟ್ಟುಕೊಂಡು ಅವರುಗಳಿಗೆ ದಿಗ್ಬಂಧನ ಹಾಕಿಲ್ಲ. ಬಿಜೆಪಿ ಶಾಸಕರನ್ನು ಸೆಳೆಯುತ್ತೇವೆ ಎಂದು ತಾವು ಎಲ್ಲಿಯೂ ಹೇಳಿಲ್ಲ. ಆದರೂ, ಬಿಜೆಪಿಯವರಿಗೆ ಭಯ ಏಕೆ ಎಂದು ಅವರು ತೀಕ್ಷ್ಣವಾಗಿ ಕುಟುಕಿದರು. ಬಿಜೆಪಿ ಶಾಸಕರನ್ನು ಹೋಟೆಲ್‍ನಲ್ಲಿ ಕೂಡಿಹಾಕಿ ಅವರ ಮೊಬೈಲ್‍ಗಳನ್ನು ಕಿತ್ತು ಇಟ್ಟುಕೊಳ್ಳಲಾಗಿದೆ ಎಂಬ ಮಾಧ್ಯಮದ ವರದಿ ನೋಡಿದರೆ, ಕೇಳಿದರೆ ಬಿಜೆಪಿ ನಾಯಕರಿಗೆ ಅವರ ಶಾಸಕರ ಮೇಲೆ ನಂಬಿಕೆ ಇಲ್ಲ ಎಂಬುದು ಗೊತ್ತಾಗುತ್ತದೆ. ಮಾಡಬಾರದ ಕೆಲಸಗಳನ್ನು ಬಿಜೆಪಿ ನಾಯಕರು ಮಾಡುತ್ತಿದ್ದು, ಆರೋಪ ಮಾತ್ರ ನಮ್ಮ ಮೇಲೆ ಹೊರಿಸಲಾಗುತ್ತಿದೆ.
ರಾಜ್ಯದ ಜನರು ಬುದ್ಧಿವಂತರಾಗಿದ್ದಾರೆ. ಎಲ್ಲರ ಆಟಗಳನ್ನು ನೋಡುತ್ತಿದ್ದಾರೆ ಎಂದರು. ಬಿಜೆಪಿ ಶಾಸಕರನ್ನು ಸೆಳೆಯುವಂತಹ ಕೆಟ್ಟ ಪರಿಸ್ಥಿತಿ ನನಗೇನು ಬಂದಿಲ್ಲ. ಕಾಂಗ್ರೆಸ್ ನಾಯಕರ ನಂಬಿಕೆ, ವಿಶ್ವಾಸ ಇರುವವರೆಗೆ ಮಾತ್ರ ಅಧಿಕಾರದಲ್ಲಿ ಮುಂದುವರಿಯುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ಅಂಜಲಿ ನಿಂಬಾಳ್ಕರ್, ಮಹಂತೇಶ್ ಕೌಜಲಗಿ, ಐವಾನ್ ಡಿಸೋಜ, ಅಬ್ದುಲ್ ಜಬ್ಬಾರ್, ರೂಪ ಶಶಿಧರ್, ಗೋವಿಂದರಾಜ್, ಡಿ.ಎಸ್.ಹೂಲಗೇರಿ, ರಾಘವೇಂದ್ರ ಹಿಟ್ನಾಳ್ ಅವರು ನೂತನ ಸಂಸದೀಯ ಕಾರ್ಯದರ್ಶಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
