ಬಳ್ಳಾರಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೃಷ್ಣ ಬೈರೇಗೌಡ ಅವರು ಕೊಳಗಲ್ , ಬಾದನಹಟ್ಟಿ , ಹಂದಿಹಾಳ್ , ಗುಡದೂರು , ಕೊರ್ಲಗುಂದಿ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ನರೇಗಾ ಸೇರಿದಂತೆ ವಿವಿಧ ಯೋಜನೆಗಳಡಿ ಕೈಗೊಳ್ಳಲಾಗಿರುವ ಕಾಮಗಾರಿಗಳು ಮತ್ತು ಇನ್ನೀತರ ಕೆಲಸಗಳನ್ನು ಗುರುವಾರ ವೀಕ್ಷಿಸಿದರು.
ಮೊದಲಿಗೆ ಬಳ್ಳಾರಿ ಸಮೀಪದ ಕೊಳಗಲ್ಲು ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು ನರೇಗಾ ಅಡಿ ಸಾಮಾಜಿಕ ಅರಣ್ಯದ ವತಿಯಿಂದ ಕೈಗೊಳ್ಳಲಾಗಿರುವ ರೈಲ್ವೆ ಗೇಟ್ ಹತ್ತಿರದ ಗಿಡ ನೆಡುವ ಕಾಮಗಾರಿ, ರಸ್ತೆ ಬದಿ ನೆಡುತೋಪು ಮತ್ತು ಕೊಳಗಲ್ಲುವಿನಲ್ಲಿ ನಿರ್ಮಿಸಲಾಗಿರುವ 35 ಎರೆಹುಳು ತೊಟ್ಟಿಗಳನ್ನು ವೀಕ್ಷಿಸಿದ ಸಚಿವರು ಈ ತೊಟ್ಟಿಗಳ ಉಪಯುಕ್ತತೆ ಕುರಿತಂತೆ ರೈತರೊಂದಿಗೆ ಕೆಲಹೊತ್ತು ಸಂವಾದ ನಡೆಸಿದರು. ರೈತರು ಎರೆಹುಳು ತೊಟ್ಟಿಯಿಂದಾಗಿ 1ಎಕರೆಗೆ 7ಸಾವಿರ ರೂಪಾಯಿ ಮತ್ತು ಸಮಯವು ಉಳಿತಾಯವಾಗಿದೆ. ನಮಗೆ ಬಹಳಷ್ಟು ಅನುಕೂಲವಾಗಿದೆ ಎಂದು ರೈತರು ಸಚಿವರಿಗೆ ಹೇಳಿದರು.ನಂತರ ಅವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ವೀಕ್ಷಿಸಿದರು.ನಂತರ ಬಾದನಹಟ್ಟಿ ಗ್ರಾಮಕ್ಕೆ ತೆರಳಿ ಅಲ್ಲಿಯೂ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಚಿವರೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ ಕೆಂಪೇಗೌಡ, ಸಚಿವರ ಆಪ್ತ ಕಾರ್ಯದರ್ಶಿ ವೆಂಕಟೇಶ, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಜಿಪಂ ಅಭಿವೃದ್ಧಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್,ತಾಪಂ ಇಒ ಜಾನಕಿರಾಮ್, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








