ಡಿಸಿ ಕಚೇರಿ ಬಳಿ ಸಂಘಟನೆಗಳ ಪ್ರತಿಭಟನೆ

ಚಿತ್ರದುರ್ಗ:

        ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಹೊಸ ಕಾಯಿದೆಯಿಂದ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಸ್ಟೇಟ್ ಕನ್ಸ್‍ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್, ಕರ್ನಾಟಕ ರಾಜ್ಯ ಕಾರ್ಮಿಕರ ಕೇಂದ್ರ ಸಂಘ ಜಿಲ್ಲಾ ಸಮಿತಿ ಹಾಗೂ ಎ.ಐ.ಟಿ.ಯು.ಸಿ.ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿ ಮತ್ತು ಕಾರ್ಮಿಕ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

        ಗಾಂಧಿವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಶೇ.3 ರಷ್ಟು ಅಸಂಘಟಿತ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಹಣ ಒದಗಿಸಬೇಕು.

         ಕಟ್ಟಡ ಕಾರ್ಮಿಕರ ನೊಂದಾವಣೆ, ನವೀಕರಣ ಹಾಗೂ ಸೌಲಭ್ಯಗಳನ್ನು ಕೊಡಿಸುವಲ್ಲಿ ಕಾರ್ಮಿಕ ಸಂಘಗಳ ಪಾತ್ರಗಳು ಈಗ ಇರುವಂತೆಯೇ ಯಥಾಪ್ರಕಾರ ಮುಂದವರೆಯಬೇಕು.

        ನೊಂದಾಯಿತ ಪುರುಷ ಕಟ್ಟಡ ಕಾರ್ಮಿಕರ ಪತ್ನಿಯರಿಗೆ ಹೆರಿಗೆ ಸಂದರ್ಭದಲ್ಲಿ ಹೆರಿಗೆ ಸೌಲಭ್ಯಗಳನ್ನು ನೀಡಬೇಕು.ಮಂಡಳಿಯಲ್ಲಿ ಈಗಾಗಲೆ ನೀಡುತ್ತಿರುವ ಎಲ್ಲಾ ಸವಲತ್ತುಗಳನ್ನು ತ್ವರಿತಗತಿಯಲ್ಲಿ ವಿಲೇಪಡಿಸಬೇಕು.ಚಿತ್ರದುರ್ಗದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಯನ್ನು ಕೂಡಲೆ ನೇಮಕಗೊಳಿಸುವುದು ಸೇರಿದಂತೆ ಹತ್ತು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕಟ್ಟಡ ಕಾರ್ಮಿಕರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

         ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಸ್ಟೇಟ್ ಕನ್ಸ್‍ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾಧ್ಯಕ್ಷ ವೈ.ಸತ್ಯಪ್ಪ ಮಾತನಾಡಿ ಕೇಂದ್ರ ಸರ್ಕಾರವು ಜಾರಿಗೆ ತರಲಿರುವ ಹೊಸ ಕಾಯಿದೆಯಿಂದ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸಂಕೇತ, ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ಕರಡು ಸಂಕೇತಗಳನ್ನು ತಕ್ಷಣವೇ ವಜಾಗೊಳಿಸಬೇಕು. ಇಲ್ಲದಿದ್ದರೆ ಕಟ್ಟಡ ಕಾರ್ಮಿಕರಿಗೆ ತುಂಬಾ ಅನ್ಯಾಯವಾಗುತ್ತದೆ .

         ಅದಕ್ಕಾಗಿ ಫೆ.7 ರಂದು ಪಾರ್ಲಿಮೆಂಟ್‍ಗೆ ಮುತ್ತಿಗೆ ಹಾಕಲಾಗುವುದು ಎಂದು ಕೇಂದ್ರ ಸರ್ಕಾರವನ್ನು ಎಚ್ಚರಿಸಿದರು.ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡುತ್ತ ಕಾರ್ಮಿಕರು ಮತ್ತು ರೈತರನ್ನು ತುಳಿಯಲು ಹೊರಟಿರುವ ಕೇಂದ್ರ ಸರ್ಕಾರ ಕಾರ್ಮಿಕರಿಗಾಗಿಯೆ ಇರುವ ಕಾನೂನು ಕಾಯ್ದೆಗಳನ್ನು ಕಿತ್ತುಕೊಳ್ಳಲು ಹೊರಟಿದೆ. ಕಾರ್ಮಿಕರ ಪರವಾಗಿರುವ ಕಾನೂನುಗಳನ್ನು ಕೇಂದ್ರ ಜಾರಿಗೆ ತರಬೇಕು. ಇಲ್ಲವಾದಲ್ಲಿ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿ.ಗೆ ತಕ್ಕ ಪಾಠ ಕಲಿಸಲಾಗುವುದೆಂದು ಹೇಳಿದರು.

        ಎ.ಐ.ಟಿ.ಯು.ಸಿ. ಜಿಲ್ಲಾ ಗೌರವಾಧ್ಯಕ್ಷ ಕಾಂ.ಸಿ.ವೈ.ಶಿವರುದ್ರಪ್ಪ ಮಾತನಾಡಿ ದೇಶದ ಎಂಬತ್ತು ಶ್ರೀಮಂತ ಕುಟುಂಬಗಳ ಪರವಾಗಿರುವ ಕೇಂದ್ರ ಸರ್ಕಾರ ಕಾರ್ಮಿಕರ ಕಾಯ್ದೆಗಳಿಗೆ ತಿದ್ದುಪಡಿ ತರುವ ಹುನ್ನಾರ ನಡೆಸುತ್ತಿದೆ. 2006 ರಲ್ಲಿ ರಾಜ್ಯದಲ್ಲಿ ಕಾಯ್ದೆ ಜಾರಿಗೆ ಬಂದಿತು.

           ಅಸಂಘಟಿತ ಕಾರ್ಮಿಕರಿಂದ ಕೋಟಿಗಟ್ಟಲೆ ಸೆಸ್ ಸರ್ಕಾರಕ್ಕೆ ಪಾವತಿಯಾಗುತ್ತಿದೆ. ವಿವಿಧ ವಿಭಾಗದ 34 ಬಗೆಯ ಕಾರ್ಮಿಕರು ಸೇರಿದಾಗ ಮಾತ್ರ ಸುಂದರ ಕಟ್ಟಡ ನಿರ್ಮಾಣವಾಗಲು ಸಾಧ್ಯ. ತಮಿಳುನಾಡು, ಕೇರಳ, ಪಂಜಾಜ್, ಪಶ್ಚಿಮ ಬಂಗಾಳ ಇನ್ನು ಅನೇಕ ರಾಜ್ಯಗಳಲ್ಲಿ ಕಟ್ಟಡ ಕಾರ್ಮಿಕರು ಅನೇಕ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಇನ್ನು ಯಾವುದೇ ಸೌಲಭ್ಯ ಕಾರ್ಮಿಕರಿಗೆ ಸಿಗುತ್ತಿಲ್ಲ. ಇರುವ ಸವಲತ್ತುಗಳನ್ನು ಕಸಿದುಕೊಳ್ಳಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ದ ಕಾರ್ಮಿಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕೆಂದರು.

          ಕೆ.ಕೆ.ಎನ್.ಎಸ್.ಎಸ್.ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ಮಸೂದೆ ಜಾರಿಯಾದರೆ ಕಟ್ಟಡ ಕಾರ್ಮಿಕರು ಹದಿಮೂರು ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಉದ್ಯಮಿ, ಬಂಡವಾಳಶಾಹಿಗಳನ್ನು ಓಲೈಸಲು ಹೊರಟಿರುವ ಪ್ರಧಾನಿ ನರೇಂದ್ರಮೋದಿರವರು ಅಸಂಘಟಿತ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಹಾಗಾಗಿ ಮುಂದಿನ ತಿಂಗಳು ಪಾರ್ಲಿಮೆಂಟ್‍ಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.ಅಂಜಿನಪ್ಪ, ಎಂ.ಸಿ.ಮಚ್ಚೇಂದ್ರಪ್ಪ, ಕೆ.ಇ.ಸತ್ಯಕೀರ್ತಿ, ರಿಜ್ವಾನ್‍ಸಾಬ್, ತಿಪ್ಪೇಸ್ವಾಮಿ, ಡಿ.ಲಕ್ಷ್ಮಿ, ಟಿ.ಪ್ರಸನ್ನ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link