ಕೆಲವರು ಹೊಟ್ಟೆಯಕಿಚ್ಚಿನಿಂದ ನನ್ನನ್ನು ಸೋಲಿಸಿದರು:ಸಿದ್ಧರಾಮಯ್ಯ

ಬೆಂಗಳೂರು

        ತಮಗೆ ಮತ್ತೆ ಅಧಿಕಾರ ಲಭಿಸಿದ್ದರೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದೆ, ಕೆಲವರ ಅಪಪ್ರಚಾರ, ಹೊಟ್ಟೆಯಕಿಚ್ಚಿನಿಂದ ಸೋಲಿಸಿದರು. ಇಷ್ಟಲ್ಲಾ ಆದರೂ ಸ್ವಾಭಿಮಾನದಿಂದ ರಾಜಕೀಯ ಮಾಡಿದ್ದೇನೆ ಹೊರತು ಯಾರಿಗೂ ತಲೆತಗ್ಗಿಸಿಲ್ಲ, ತಗ್ಗಿಸುವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

       ಬನಶಂಕರಿ 6ನೇ ಹಂತದ ಜೆಟ್ಟಿಗರಹಳ್ಳಿಯಲ್ಲಿ ಕನಕ ಸಮುದಾಯದ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮುದಾಯಕ್ಕೆ ಒಳಿತು ಮಾಡುವವರ ಜೊತೆ ಹಿಂದುಳಿದ ವರ್ಗಗಳು ಹೋಗಬೇಕು. ಸ್ವಾರ್ಥಕ್ಕಾಗಿ ಸಮುದಾಯವನ್ನು ಒಳಸಿಕೊಳ್ಳುವವರಿಂದ ದೂರ ಉಳಿಯಿರಿ. ಅಂಬಾಸಿಡರ್ ಕಾರಿನಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಕುರುಬ ಸಮುದಾಯವನ್ನು ಸಂಘಟಿಸಿದೆವು. ಅಲ್ಲಲ್ಲಿ ಕನಕ ಜಯಂತಿ ಆಚರಿಸಿ ಜನರಲ್ಲಿ ಜಾಗೃತಿ ಮೂಡಿಸಿ ಕನಕ ಗುರುಪೀಠ ರಚನೆ ಮಾಡಲಾಯಿತು ಎಂದು ಕಾಗಿನೆಲೆ ಮಠ ಸ್ಥಾಪನೆ, ಕುರುಬ ಸಮುದಾಯ ಸಂಘಟಿಸಿದ ದಿನಗಳನ್ನು ಸಿದ್ದರಾಮಯ್ಯ ನೆನಪಿಸಿಕೊಂಡರು.

         ರಾಜ್ಯದಲ್ಲಿ ಎಲ್ಲಾ ದಾರ್ಶನಿಕರ ಜಯಂತಿ ಆಚರಣೆಗೆ ಚಾಲನೆ ನೀಡಿದೆವು. ಹಡಪದ ಹಪ್ಪಣ್ಣ, ಹೇಮರೆಡ್ಡಿ ಮಲ್ಲಮ್ಮ, ವಿಶ್ವಕರ್ಮ ನಿಗಮ ರಚನೆ, ಅಂಬಿಗರ ಚೌಡಯ್ಯ ಸೇರಿದಂತೆ ಎಲ್ಲ ಸಮುದಾಯಗಳ ದಾರ್ಶನಿಕರ ಜಯಂತಿ ಮಾಡಿರುವ ಜೊತೆಗೆ, ರಾಜ್ಯದಲ್ಲಿ 7೦೦ ಕನಕ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದಾಗಿ ಸಿದ್ದರಾಮಯ್ಯ ತಿಳಿಸಿದರು.

         ಸಾರ್ವಜನಿಕರ ಆಸ್ತಿ ವಿಷ ಇದ್ದ ಹಾಗೆ, ಅದನ್ನು ಯಾರೂ ಕಬಳಿಸಬಾರದು, ತಾವೂ ರಾಜಕೀಯ ಜೀವನದಲ್ಲಿ ಆಸ್ತಿ ಕಬಳಿಸಿಲ್ಲ. ಸಮಾಜದ ಹೆಸರಿನಲ್ಲಿ ಭೂಮಿ ಕಬಳಿಸುವ ರಾಜಕಾರಣಿಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು. ರಾಜಕಾರಣಕ್ಕೆ ಬಂದ ಮೇಲೆ ಕೇವಲ ಕುರುಬರಿಗೆ ಮಾತ್ರ ಅಲ್ಲ ಹಿಂದುಳಿದ ಎಲ್ಲ ವರ್ಗಗಳಿಗೂ ಸಹಾಯ ಮಾಡಿದ್ದೇನೆ ಎಂದರು.

         ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಬರಬೇಕು ಎಂದ ಅವರು, ಮೀಸಲಾತಿ ಇಲ್ಲದೇ ಇದ್ದರೆ ಹಿಂದುಳಿದ ವರ್ಗಗಳ ನಾಯಕರು ಯಾರು ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ, ತಾವು ಮುಖ್ಯಮಂತ್ರಿ ಆಗಿದ್ದಾಗ ಅಹಿಂದ ಸಮುದಾಯಗಳಿಗೆ ಸ್ವಲ್ಪ ಹೆಚ್ಚು ಅನುದಾನ ನೀಡಿದ್ದರೂ, ಇತರ ಸಮುದಾಯಗಳನ್ನು ಕಡೆಗಣಿಸಿಲ್ಲ ಸಾಕಷ್ಟು ಅನುದಾನ, ಯೋಜನೆಗಳನ್ನು ತಮ್ಮ ಆಡಳಿತಾವಧಿಯಲ್ಲಿ ನೀಡಿರುವುದಾಗಿ ಸರ್ಕಾರ ಸಾಧನೆಗಳನ್ನು ಹೆಮ್ಮೆಯಿಂದ ಹೇಳಿಕೊಂಡರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link