ಮಾನವ ಸಂಪನ್ಮೂಲ ಸದ್ಬಳಿಕೆಯಿಂದ ದೇಶ ಅಭಿವೃದ್ಧಿ

ಚನ್ನಗಿರಿ:

         ಮಾನವ ಸಂಪನ್ಮೂಲದ ಸದ್ಭಳಕೆಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.

         ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ನಡೆದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ದೇಶದ ಮುನ್ನಡೆಯಬೇಕಾದರೆ, ಆ ದೇಶದಲ್ಲಿರುವ ಮಾನವ ಸಂಪನ್ಮೂಲ ಬಳಕೆಯಾದಾಗ ಮಾತ್ರ ಸಾಧ್ಯವಾಗಲಿದೆ ಎಂದು ಹೇಳಿದರು.

         ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಒಟ್ಟಾಗಿ ಕಾರ್ಯನಿರ್ವಹಿಸಿದರೆ, ಭಾರತವು ಸೂಪರ್ ಪವರ್ ದೇಶವಾಗಿ ಹೊರಹೊಮ್ಮಲಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾರರು ಯಾವುದೇ ಒಂದು ಪಕ್ಷಕ್ಕೆ ಬಹುಮತ ನೀಡಿದಾಗ ಮಾತ್ರ ಆ ದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಸಾಧ್ಯವಾಗಲಿದೆ ಎಂದರು.

       ವಿಭಿನ್ನ ಧರ್ಮ, ಜಾತಿ ಮತ್ತು ಭಾಷೆಯನ್ನಾಡುವ ಭಾರತ ದೇಶ ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಪ್ರಾಂತ್ಯಗಳಾಗಿ ಹಂಚಿ ಹೋಗಿತ್ತು. 1950 ಜ. 26ರಂದು ಗಣರಾಜ್ಯಗಳನ್ನಾಗಿ ಮಾಡಲಾಯಿತು. ಆ ಸವಿನೆನಪಿಗಾಗಿ ಪ್ರತಿ ವರ್ಷ ಜ. 26ರಂದು ಗಣರಾಜ್ಯೋತ್ಸವನ್ನು ಆಚರಿಸಲಾಗುತ್ತಿದೆ ಎಂದು ನುಡಿದರು.

       ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಿ.ಆರ್. ರೂಪಾ ಶ್ರೀಧರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳ ಟಿ.ವಿ. ರಾಜು, ಯಶೋದಮ್ಮ ಮರುಳಪ್ಪ, ಎಪಿಎಂಸಿ ಅಧ್ಯಕ್ಷ ಜಿ.ಎಸ್. ವೀರಭದ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಡಿ. ನಾಗರಾಜ್, ಸಿಪಿಐ ಕೆ.ಎನ್. ಗಜೇಂದ್ರಪ್ಪ, ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್. ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಐ. ಬಸವರಾಜ, ಬಿಇಒ ಆರ್. ಮಂಜುಳ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ, ಎನ್ ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿಧ ಶಾಲಾ ಕಾಲೇಜುಗಳ ಮಕ್ಕಳು ಆಕರ್ಷಕ ಗೌರವ ಪಥ ಸಂಚಲನ ನಡೆಸಿಕೊಟ್ಟರು.ತಹಶೀಲ್ದಾರ್ ಎನ್.ಜೆ. ನಾಗರಾಜ್ ಧ್ವಜಾರೋಹಣ ನೆರವೇರಿಸಿ, ಸಂದೇಶ ವಾಚಿಸಿದರು.

        ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಪಾಂಡೋಮಟ್ಟಿ ಗ್ರಾಮದ ಸಾಹಿತಿ ಕೆ.ಜಿ. ಸರೋಜಾ ನಾಗರಾಜ್ ಅವರನ್ನು ತಾಲ್ಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ನಂತರ ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link