ಬೆಂಗಳೂರು
ಕಂಠ ಪೂರ್ತಿ ಕುಡಿದು ಕ್ರಿಸ್ಮಸ್ ಸಂಭ್ರಮಾಚರಣೆ ಮಾಡುತ್ತಿದ್ದ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ದೇವರಜೀವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಣ್ಣನಗರದ ಪೇಂಟರ್ ಜಗಧೀಶಕುಮಾರ(28)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ, ಕೃತ್ಯವೆಸಗಿದ ಅರುಣ, ಶರತ್, ಜಾನ್ ಪೀಟರ್, ಮತ್ತು ಅಪ್ಪುನನ್ನು ದೇವರಜೀವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಣ್ಣ ನಗರದ ಸೆವೇಂಥ್ ಡೇ ಚರ್ಚ್ ಮುಂಭಾಗದಲ್ಲಿ ಕಳೆದ ಮಂಗಳವಾರ ಮಧ್ಯರಾತ್ರಿ 1.30ರ ವೇಳೆ ಕುಡಿದು ಕ್ರಿಸ್ಮಸ್ ಸಂಭ್ರಮಾಚರಣೆ ಮಾಡುತ್ತಿದ್ದ ಜಗಧೀಶಕುಮಾರ ಮತ್ತು ಅರುಣ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದಿದೆ.
ಜಗಳ ವಿಕೋಪಕ್ಕೆ ತಿರುಗಿದಾಗ ಜಗಧೀಶಕುಮಾರಗೆ ಅರುಣ ಮತ್ತು ಸ್ನೇಹಿತರು ಸೇರಿ ಕಬ್ಬಿಣದ ಪೈಪನಿಂದ ತೆಲೆಗೆ ಹೊಡೆದಿದ್ದು, ಗಾಯಗೊಂಡ ಅವರನ್ನು ನಿಮಾನ್ಸ್ ಆಸ್ಪತ್ರೆಗೆ ನಂತರ ವೈದ್ಯರ ಸಲಹೆ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿದ ದೇವರಜೀವನಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ರಾಹುಲ್ಕುಮಾರ್ ಶಹಪುರವಾಡ ತಿಳಿಸಿದ್ದಾರೆ.
ಮಾಲೀಕರ ಮನೆ ದಂಪತಿ ಕಳವು
ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಹೊಂಚು ಹಾಕಿ ಚಿನ್ನಾಭರಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿ ಖತರ್ನಾಕ್ ಸೆಕ್ಯೂರಿಟಿ ಗಾರ್ಡ್ ಹಾಗೂ ಆತನ ಪತ್ನಿ ಪರಾರಿಯಾಗಿರುವ ದುರ್ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊರಮಾವುವಿನ ಪ್ರವೀಣ್ ಕುಮಾರ್ ಅವರು ಪತ್ನಿ ಜೊತೆ ಹೊರಹೋಗಿದ್ದ ಸಮಯ ಸಾಧಿಸಿದ ಸೆಕ್ಯೂರಿಟಿ ಗಾರ್ಡ್ ನೇಪಾಳಿ ಮೂಲದ ಮಂಗಲ್ ಹಾಗೂ ಸೌಭಾಗ್ಯ ದೇವಿ ದಂಪತಿ ಮನೆಗೆ ನುಗ್ಗಿ ಬೀರು ಬೀಗ ಒಡೆದು 750 ಗ್ರಾಂ ಚಿನ್ನಾಭರಣ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಕಳ್ಳತನ ಮಾಡಿರುವ ಸುಳಿವು ಸಿಗಬಾರದೆಂದು ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು ಸಹ ಕಳ್ಳತನ ಮಾಡಿದ್ದಾರೆ. ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆ ಮಾಲೀಕ ಪ್ರವೀಣ್ ದಂಪತಿ ಮನೆಗೆ ವಾಪಸ್ಸಾದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.ಪ್ರವೀಣ್ ಅವರ ಮನೆಯಲ್ಲಿ ಕಳೆದ ಒಂದು ವರ್ಷದಿಂದ ದಂಪತಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು
ಕೂಡಲೇ ಪ್ರವೀಣ್ ಅವರು ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖತರ್ನಾಕ್ ದಂಪತಿಯ ಹುಡುಕಾಟಕ್ಕೆ ಶೋಧ ನಡೆಸಿದ್ದಾರೆ.
ಒಂದೂವರೆ ಲಕ್ಷ ಕಳವು
ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ 1 ಲಕ್ಷದ 50 ಸಾವಿರ ಹಣವಿದ್ದ ಬ್ಯಾಗ್ನ್ನು ದುಷ್ಕರ್ಮಿಯೊರ್ವ ಕಸಿದು ಪರಾರಿಯಾಗಿರುವ ದುರ್ಘಟನೆ ಸಿಟಿಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ರಂಗನಾಥಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.
ಹಲ್ಲೆಯಿಂದ ಗಾಯಗೊಂಡಿರುವ ಕೋಲಾರದ ಮೂಲದ ಅರವಿಂದ್ ಕುಮಾರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ನಗರದ ಸಿಟಿ ಮಾರ್ಕೆಟ್ನ ರಂಗನಾಥಸ್ವಾಮಿ ದೇವಸ್ಥಾನದ ಬಳಿ ತಮ್ಮ ಅಕ್ಕನ ಮಗನನ್ನ ಮಾತನಾಡಿಸಿ ವಿಕ್ರಂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾವನ ಚಿಕಿತ್ಸೆಗೆ ಬ್ಯಾಗ್ನಲ್ಲಿ 1 ಲಕ್ಷದ 50 ಸಾವಿರ ಹಣ ತಂದಿದ್ದರು. ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬ ಹಲ್ಲೆ ಮಾಡಿ ಕೈಯ್ಯಲ್ಲಿದ್ದ ಹಣದ ಬ್ಯಾಗನ್ನ ಕಿತ್ತು ಪರಾರಿಯಾಗಿದ್ದಾನೆ.ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಸಿಟಿ ಮಾರ್ಕೆಟ್ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಯ ಪತ್ತೆಗಾಗಿ ತೀವ್ರ ಶೋಧ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ