ಬೆಂಗಳೂರು
ಸೋಮವಾರ ನಡೆಯಲಿರುವ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸೋಂಕು ಪತ್ತೆಯಾಗಿರುವ 9 ಜಿಲ್ಲೆಗಳಲ್ಲಿ ಮೈಸೂರು, ಮಂಗಳೂರು, ಕೊಡಗು, ಕಲಬುರಗಿ ಮತ್ತಿತರ ಜಿಲ್ಲೆಗಳು ಗಡಿ ಜಿಲ್ಲೆಗಳಾಗರುವ ಕಾರಣ ಅಲ್ಲಿಂದ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎನ್ನುವ ಕಾರಣದಿಂದ ಪಿಯುಸಿ ಪರೀಕ್ಷೆಯನ್ನು ಮುಂದೂಡಲಾಗುತ್ತಿದೆ. ಪರೀಕ್ಷೆಯನ್ನು ದಿನಾಂಕವನ್ನು ಸದ್ಯದಲ್ಲೇ ತಿಳಿಸುತ್ತೇವೆ ಎಂದರು.
ಮಾರ್ಚ್ 27 ರಿಂದ ನಡೆಯಬೇಕಾಗಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಮುಂದೂಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. 9 ಜಿಲ್ಲೆಗಳಲ್ಲಿ ಮಾಸಾಂತ್ಯದವರೆಗೆ ಬಂದ್ ಇರುವ ಹಿನ್ನೆಲೆಯಲ್ಲಿ ಯಾವುದೇ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತರಾಗಬಾರದು. ತೊಂದರೆಗೀಡಾಗಬಾರದು ಎಂಬ ಉದ್ದೇಶದಿಂದ ಈ ತೀರ್ಮಾನ ತೆಗೆಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ಶಿಕ್ಷಕೇತರರಿಗೆ ಮಾ.31ರ ವರೆಗೆ ಸುರೇಶ್ ಕುಮಾರ್ ರಜೆ ಘೋಷಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಚಿವರು,ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ, ಅನುದಾನರಹಿತ ಶಾಲಾ ಶಿಕ್ಷಕರಿಗೆ ಮತ್ತು ಶಿಕ್ಷಕೇತರ ಸಿಬ್ಬಂದಿಗೆ 31 ರವರೆಗೆ ರಜೆ ಘೋಷಿಸಲಾಗಿದ್ದು ಅವರಿಗೆ ಕೊಟ್ಟಿರುವ ಶೈಕ್ಷಣಿಕ ಕಾರ್ಯಗಳನ್ನು ಅವರವರ ಮನೆಗಳಿಂದಲೇ ನಿರ್ವಹಿಸುವುದಕ್ಕೆ ಸೂಚನೆ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ