ಕಾಂಗ್ರೆಸ್‌ ವಿರುದ್ಧ ಗುಡುಗಿದ ಬಿ.ವಿ.ವೈ….!

ಬೆಂಗಳೂರು

    ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು 10 ವರ್ಷಗಳು ಕಳೆದರೂ ನರೇಂದ್ರ ಮೋದಿ ಅವರ ಜನಪ್ರಿಯತೆ ಇನ್ನೂ ಉತ್ತುಂಗಕ್ಕೆ ಏರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.

    ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದಾ ವರು, ಮತ್ತೊಮ್ಮೆ ಮೋದಿ ಸರಕಾರ ಎಂಬುದು ಕೇವಲ ಬಿಜೆಪಿ ಕಾರ್ಯಕರ್ತರ ಆಶಯವಲ್ಲ, ಇದು ರಾಜ್ಯದ ಮತ್ತು ದೇಶದ ಜವಾಬ್ದಾರಿಯುತ ನಾಗರಿಕ ಮತದಾರರ ನಿರ್ಧಾರ ಎಂದರು.

    ನರೇಂದ್ರ ಮೋದಿಯವರ ಕಳೆದ 10 ವರ್ಷಗಳ ಕಾರ್ಯವೈಖರಿ, ಆಡಳಿತ ವೈಖರಿ, ಕೇಂದ್ರದ ಮೋದಿ ನೇತೃತ್ವದ ಜನಪರ ಯೋಜನೆಗಳ ಪರಿಣಾಮವಾಗಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದು 10 ವರ್ಷಗಳು ಕಳೆದರೂ ನರೇಂದ್ರ ಮೋದಿಜೀ ಅವರ ಜನಪ್ರಿಯತೆ ಇನ್ನೂ ಉತ್ತುಂಗಕ್ಕೆ ಏರಿದೆ ಎಂದರು.

   ಇದು ಮೊತ್ತಮೊದಲ ಬಾರಿಗೆ ಹೀಗಾಗಿದೆ. ದೇಶದ ಜನತೆ ಮೋದಿಯವರ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ. ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಮೋದಿಯವರ ಮತ್ತು ಬಿಜೆಪಿ ಕೇಂದ್ರ ಸರಕಾರದ ಯೋಜನೆಗಳು ಮನೆಮನೆಗೆ ತಲುಪಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ಸಂಕಲ್ಪದೊಂದಿಗೆ ಕೇಂದ್ರದ ಮೋದಿಯವರ ನೇತೃತ್ವದ ಸರಕಾರ ಜನಪರ ಯೋಜನೆಗಳನ್ನು ನೀಡಿದೆ. ಹಾಗಾಗಿ ಮೋದಿ ಮತ್ತೊಮ್ಮೆ ಎಂಬ ಘೋಷಣೆ ದೇಶಾದ್ಯಂತ ಕೇಳಿಸುತ್ತಿದೆ ಎಂದು ತಿಳಿಸಿದರು.  

   ಕರ್ನಾಟಕವು ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು ಎಂಬುದನ್ನು ನಾವು ಮತ್ತೆ ಸಾಬೀತು ಮಾಡಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ನಿಷ್ಕ್ರಿಯವಾಗಿದೆ. ಅದು ಬರಗಾಲ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳು ಎಚ್ಚತ್ತುಕೊಳ್ಳದೆ ಇರುವುದು ನಿಜಕ್ಕೂ ದುರಂತವೇ ಸರಿ ಎಂದು ಕಾಂಗ್ರೆಸ್‌ ಸರ್ಕಾರ ವಿರುದ್ಧ ಕಿಡಿಕಾರಿದರು.

   ಇಲ್ಲಿನ ಕಾಂಗ್ರೆಸ್ ಸರಕಾರ ಅಭಿವೃದ್ಧಿ ಶೂನ್ಯ. ಅಲ್ಪಸಂಖ್ಯಾತರ ತುಷ್ಟೀಕರಣವನ್ನು ಮಾಡುತ್ತಲೇ ಬಂದಿದೆ. ಇದಕ್ಕೆ ತಕ್ಕ ಉತ್ತರವನ್ನು ಕೊಡುವ ಸಂದರ್ಭ, ಕಾಲ ಕೂಡಿ ಬಂದಿದೆ ಎಂಬ ಭಾವನೆ ಪ್ರತಿಯೊಬ್ಬರದು. ಹಿಂದೆ ಬಿಜೆಪಿ ಸರಕಾರ ಅಸ್ತಿತ್ವದಲ್ಲಿ ಇದ್ದಾಗ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ನೀಡಿದ ಕೊಡುಗೆಗಳು, ಕಾರ್ಯಕ್ರಮಗಳು, ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ನೀಡಿದ ಜನಪರ ಯೋಜನೆಗಳನ್ನು ರಾಜ್ಯದ ಜನತೆ ಮರೆತಿಲ್ಲ ಎಂದರು.

   370ನೇ ವಿಧಿ ರದ್ದತಿ, ತ್ರಿವಳಿ ತಲಾಖ್ ರದ್ದು ಸೇರಿ ಅನೇಕ ಕಾರ್ಯಗಳು ನಡೆದಿವೆ. ಮೂಲಭೂತ ಸೌಕರ್ಯ ನೀಡಲು ಕೇಂದ್ರ ಸರಕಾರ ಶ್ರಮಿಸುತ್ತಿದೆ. ಇದೆಲ್ಲದರ ಪರಿಣಾಮವಾಗಿ ದೇಶ ಮಾತ್ರವಲ್ಲದೆ ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಮೋದಿ ಸರಕಾರ ಎಂಬ ಅಭಿಪ್ರಾಯ ಸರ್ವಸಾಮಾನ್ಯವಾಗಿದೆ. ಎಲ್ಲ ಕಡೆಗಳಲ್ಲಿ ಅದನ್ನು ಕೇಳುವಂತಾಗಿದೆ ಎಂದು ತಿಳಿಸಿದರು.

   ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ‘ನದಿಗಳಲ್ಲಿ ನೀರಿಲ್ಲ; ಕುಡಿಯುವ ನೀರಿನ ಹಾಹಾಕಾರ ಇದೆ’ ಎಂದು ತಿಳಿಸಿದ್ದನ್ನು ಗಮನಿಸಿದ್ದೇನೆ. ಈ ಹಿಂದೆ ಯಾವತ್ತು ಕಾವೇರಿ ನೀರನ್ನು ತಮಿಳುನಾಡಿಗೆ ಯಥೇಚ್ಛವಾಗಿ ಹರಿಸುತ್ತಿದ್ದರೋ ಆಗಲೇ ಕಾಂಗ್ರೆಸ್ ಸರಕಾರ- ಮುಖ್ಯಮಂತ್ರಿಗಳಿಗೆ ಜ್ಞಾನೋದಯ ಆಗಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇಂದು ನೀರಿಗಾಗಿ ಹಾಹಾಕಾರ ಇರುತ್ತಿರಲಿಲ್ಲ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap