ಲಾಕ್‍ಡೌನ್ ಸಂದರ್ಭದಲ್ಲಿ ಅಕುಶಲ ಕಾರ್ಮಿಕರ ಕೈ ಹಿಡಿದ ನರೇಗಾ

 ತುಮಕೂರು:

      2020-21ನೇ ಸಾಲಿನಲ್ಲಿ ಕೊರೋನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆದ ಪರಿಣಾಮ ಜಿಲ್ಲೆಯಲ್ಲಿ ದುಡಿಯುವ ಕೈಗಳಿಗೆ ಕೆಲಸವಿಲ್ಲದ ಸಮಯದಲ್ಲಿ ನರೇಗಾ ಸಂಜೀವಿನಿಯಾಗಿ ಕೈತುಂಬಾ ಕೆಲಸವನ್ನು ನೀಡಿ ಧೈರ್ಯ ತುಂಬಿದೆ.

      ಕೊರಟಗೆರೆ, ಮಧುಗಿರಿ, ಶಿರಾ ಸೇರಿದಂತೆ ಜಿಲ್ಲೆಯ ತಾಲ್ಲೂಕುಗಳಲ್ಲಿ ಜಿಲ್ಲಾ ಪಂಚಾಯತಿ ವತಿಯಿಂದ ನರೇಗಾ ಯೋಜನೆಯಡಿಯಲ್ಲಿ ದನದ ಕೊಟ್ಟಿಗೆ ನಿರ್ಮಾಣ, ಕೃಷಿಹೊಂಡ, ಮನೆ ನಿರ್ಮಾಣ, ಗೋಕಟ್ಟೆ ಅಭಿವೃದ್ಧಿ, ಕೆರೆ-ಕಾಲುವೆಗಳ ಹೂಳೆತ್ತುವುದು, ರಸ್ತೆ ಬದಿಗಳಲ್ಲಿ ಸಸಿ ನೆಡುವುದು ಹೀಗೆ ಹಲವಾರು ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ದುಡಿಯುವ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಮಧುಗಿರಿ ತಾಲ್ಲೂಕಿನಲ್ಲಿ ಮೇ ತಿಂಗಳ ಮೊದಲ ವಾರದ ಅಂತ್ಯಕ್ಕೆ 32623 ಮಾನವ ದಿನಗಳನ್ನು ನರೇಗಾದಡಿ ಸೃಜನೆ ಮಾಡಲಾಗಿದೆ.

      ಮಧುಗಿರಿ ತಾಲ್ಲೂಕಿನಲ್ಲಿ 39 ಗ್ರಾಮಪಂಚಾಯತಿಗಳ ವ್ಯಾಪ್ತಿಯಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಹಾಗೂ ದನದ ಕೊಟ್ಟಿಗೆ ನಿರ್ಮಾಣ, ಬದು ನಿರ್ಮಾಣ, ಕೃಷಿ ಹೊಂಡ, ಮನೆ ನಿರ್ಮಾಣ, ಸಮುದಾಯ ಕಾರ್ಯಕ್ರಮಗಳಾದ ಗೋಕಟ್ಟೆ ಅಭಿವೃದ್ಧಿ ಸೇರಿದಂತೆ 159 ಕಾಮಗಾರಿಗಳು ಚಾಲ್ತಿಯಲ್ಲಿವೆ. ಕೊರಟಗೆರೆ ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಮೇ ಮೊದಲ ವಾರದೊಳಗೆ 23039 ಮಾನವ ದಿನಗಳನ್ನು ಸೃಜನೆ ಮಾಡಿ 29 ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ 20 ದನದ ಕೊಟ್ಟಿಗೆ ನಿರ್ಮಾಣ, 12 ಕೃಷಿ ಹೊಂಡ ಹಾಗೂ 68 ಮನೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಲಾಕ್‍ಡೌನ್ ಸಂದರ್ಭದಲ್ಲಿ ಸ್ಥಳೀಯ ಅಕುಶಲ ಕೂಲಿ ಕಾರ್ಮಿಕರಿಗೆ ದುಡಿಯಲು ಕೆಲಸ ದೊರೆತು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ.

      ಕೊರಟಗೆರೆ ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮಪಂಚಾಯತಿಯ ಗಟ್ಲಳ್ಳಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಸಸಿ ನೆಡುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದರಿಂದ 15 ಮಂದಿ ಸ್ಥಳೀಯ ಕಾರ್ಮಿಕರಿಗೆ ಕೆಲಸ ದೊರೆತು ಉತ್ತಮ ಜೀವನ ಮುಂದುವರೆಸಲು ಅನುಕೂಲವಾಗಿದೆ. ಅದೇರೀತಿ ಶಿರಾ ತಾಲ್ಲೂಕಿನಲ್ಲಿ ಸಂಕಷ್ಟದಲ್ಲಿದ್ದ ಕೂಲಿ ಕಾರ್ಮಿಕರಿಗೆ ನರೇಗಾ ವರದಾನವಾಗಿದೆ. ಶಿರಾ ತಾಲ್ಲೂಕಿನ ಅಜ್ಜಯ್ಯನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡು 780 ಮಾನವ ದಿನಗಳನ್ನು ಸೃಜಿಸಲಾಗಿದೆ. ಅಲ್ಲದೆ ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳುವಾಗ ಕೂಲಿ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್, ಕೆಲಸದ ಸಮಯದಲ್ಲಿ ಸೂಕ್ತ ನೆರಳಿನ ವ್ಯವಸ್ಥೆ, ಕುಡಿಯುವ ನೀರು ಒದಗಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಬಗ್ಗೆ ಅವರಿಗೆ ಅರಿವು ಮೂಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಸಿಇಓ ಶುಭಾ ಕಲ್ಯಾಣ್ ತಿಳಿಸಿದ್ದಾರೆ.

      ಲಾಕ್‍ಡೌನ್ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಕೈಗೊಂಡು ದುಡಿಯುವ ಕೈಗಳಿಗೆ ಕೆಲಸ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link