ವಲಯ ಕಚೇರಿ: ಪಾಲಿಕೆಯ ವಿವಾದಾಸ್ಪದ ಮಾಹಿತಿ

ತುಮಕೂರು

        ತುಮಕೂರು ನಗರದ ಮೂರು ಸ್ಥಳಗಳಲ್ಲಿರುವ ವಲಯ ಕಚೇರಿ (ಜೋನಲ್ ಆಫೀಸ್)ಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ . ವಲಯ ಆಯುಕ್ತರಾದಿಯಾಗಿ ಎಲ್ಲ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ವಿವಿಧ  ಸೌಲಭ್ಯಗಳು ಸಾರ್ವಜನಿಕರಿಗೆ ಈ ಕಚೇರಿಗಳ ಮೂಲಕ ಲಭಿಸುತ್ತಿದೆಯೆಂದು ತುಮಕೂರು ಮಹಾನಗರಪಾಲಿಕೆಯು ಮಾಹಿತಿ ನೀಡಿರುವುದು ವಿವಾದಾಸ್ಪದವಾಗಿದೆ ಎಂದು ತುಮಕೂರಿನ ಮಾಹಿತಿಹಕ್ಕು ಕಾರ್ಯಕರ್ತ ಆರ್.ವಿಶ್ವನಾಥನ್ ಆರೋಪಿಸಿದ್ದಾರೆ.

       ಸಾರ್ವಜನಿಕರು ಬಹುತೇಕ ಮರೆತೇಹೋಗಿದ್ದ, ಪಾಲಿಕೆ ಆಡಳಿತದಿಂದ ಮೂಲೆಗುಂಪಾಗಿದ್ದ ಹಾಗೂ ಕಾಟಾಚಾರಕ್ಕೆ ಹೆಸರಿನಲ್ಲಷ್ಟೇ ಉಳಿದಿದ್ದ ಮೂರು ವಲಯ ಕಛೇರಿಗಳ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕೋರಿ ತಾವು ಸಲ್ಲಿಸಿದ್ದ ಅರ್ಜಿಗೆ ತುಮಕೂರು ಮಹಾನಗರಪಾಲಿಕೆಯು ಅಕ್ಟೋಬರ್ 15 ರಂದು ನೀಡಿರುವ “ಹಿಂಬರಹ” (ಸಂಖ್ಯೆ:ತುಮಪಾ/ ಸಿಬ್ಬಂದಿ/ಮಾಹ/ಸಿಆರ್/98/2018-19, ದಿನಾಂಕ:15-10-2018)ದಲ್ಲಿರುವ ಮಾಹಿತಿಯು ಸಾರ್ವಜನಿಕ ಚರ್ಚೆಗೆ ಎಡೆಮಾಡಿಕೊಡುವಂತಿದೆ ಎಂದಿದ್ದಾರೆ.

     ಬೆಳಗ್ಗೆ 10 ರಿಂದ 5-30 ರವರೆಗೆ 1ನೇ ವಲಯ ಕಚೇರಿಯು ಶಿರಾಗೇಟ್‍ನ ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣದಲ್ಲಿದೆ. 2ನೇ ವಲಯ ಕಚೇರಿಯು ಚಿಕ್ಕಪೇಟೆಯ ದಿವಾನ್ ಪೂರ್ಣಯ್ಯ ಛತ್ರದಲ್ಲಿದೆ. 3ನೇ ವಲಯ ಕಚೇರಿಯು ಶೆಟ್ಟಿಹಳ್ಳಿ ರಿಂಗ್ ರಸ್ತೆಯ ಟೂಡಾ ವಾಣಿಜ್ಯ ಸಂಕೀರ್ಣದಲ್ಲಿದೆ. ಬೆಳಗ್ಗೆ 10 ರಿಂದ ಸಂಜೆ 5-30 ರವರೆಗೆ ಇವುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪಾಲಿಕೆಯು ಉತ್ತರ ಕೊಟ್ಟಿದೆ.

 ವಾರ್ಡ್ ಹಂಚಿಕೆ, ಅಧಿಕಾರಿಗಳ ಸಿಬ್ಬಂದಿಗಳ ನಿಯೋಜನೆ ವಲಯ ಕಚೇರಿಗಳ ಕಾರ್ಯನಿರ್ವಹಣೆಗಾಗಿ 35 ವಾರ್ಡ್‍ಗಳನ್ನು ವಿಂಗಡಿಸಿ ಹಂಚಿಕೆ ಮಾಡಲಾಗಿದೆ. ಇದರ ಪ್ರಕಾರ 1 ನೇ ವಲಯ ಕಚೇರಿಗೆ 1, 2, 3, 16, 19, 20, 21, 23 ಈ ರೀತಿ ಒಟ್ಟು 8 ವಾರ್ಡ್‍ಗಳನ್ನು; 2 ನೇ ವಲಯ ಕಚೇರಿಗೆ 4, 5, 6, 7, 8, 9, 10, 11, 12, 13, 14, 15, 17, 18- ಹೀಗೆ ಒಟ್ಟು 14 ವಾರ್ಡ್‍ಗಳನ್ನು; 3 ನೇ ವಲಯ ಕಚೇರಿಗೆ 22, 24, 25, 26, 27, 28, 29, 30, 31, 32, 33, 34, 35 – ಹೀಗೆ ಒಟ್ಟು 13 ವಾರ್ಡ್‍ಗಳನ್ನು ಆಡಳಿತಾತ್ಮಕವಾಗಿ ಹಂಚಲಾಗಿದೆ. 1ನೇ ವಲಯ ಕಚೇರಿಗೆ ಎಚ್.ಮರಿಯಪ್ಪ, 2ನೇ ವಲಯ ಕಚೇರಿಗೆ ಕೆ . ಎನ್ . ಧರ್ಮೇಂದ್ರ , 3ನೇ ವಲಯ ಕಚೇರಿಗೆ ಸಿ.ಯೋಗಾನಂದ ಅವರು ವಲಯ ಆಯುಕ್ತರಾಗಿದ್ದಾರೆ. ಪ್ರತಿ ವಲಯ ಕಚೇರಿಗೂ ವಿವಿಧ ವಿಭಾಗಗಳಿಗೆ ಅನುಗುಣವಾಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ಗಳು, ಸಹಾಯಕ ಇಂಜಿನಿಯರ್‍ಗಳು, ಕಿರಿಯ ಇಂಜಿನಿಯರ್‍ಗಳನ್ನು, ಪರಿಸರ ಇಂಜಿನಿಯರ್, ಕಂದಾಯಾಧಿಕಾರಿ, ಸಹಾಯಕ ಕಂದಾಯಾಧಿಕಾರಿ, ಕಚೇರಿ ವ್ಯವಸ್ಥಾಪಕ, ಸಮುದಾಯ ಸಂಘಟನಾಧಿಕಾರಿ, ಸಮುದಾಯ ಸಂಘಟಕರು, ಕಂದಾಯ ನಿರೀಕ್ಷಕರು, ಕರವಸೂಲಿಗಾರರು, ಹಿರಿಯ/ಕಿರಿಯ ಆರೋಗ್ಯ ನಿರೀಕ್ಷಕರು, ಪ್ರಥಮ/ದ್ವಿತೀಯ ದರ್ಜೆ ಸಹಾಯಕರು, ಡಾಟಾ ಎಂಟ್ರಿ ಆಪರೇಟರ್, ಡಿ-ದರ್ಜೆ ನೌಕರರು ಈ ರೀತಿ ಅಧಿಕಾರಿ-ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಪಾಲಿಕೆ ವಿವರಿಸಿದೆ.

  ಇಲ್ಲಿನ ಸೇವೆ-ಸೌಲಭ್ಯಗಳು
ಈ 3 ವಲಯ ಕಚೇರಿಗಳಲ್ಲಿ ಲಭಿಸಲಿರುವ ಸೇವೆ-ಸೌಲಭ್ಯಗಳ ಬಗ್ಗೆ ಪಾಲಿಕೆಯು ಉತ್ತರಿಸಿದೆ. ಆಯಾಯ ವಾರ್ಡ್‍ಗಳಿಗೆ ಸಂಬಂಧಿಸಿದಂತೆ ನಮೂನೆ-3 ಹಾಗೂ ಜನನ-ಮರಣ ಪ್ರಮಾಣಪತ್ರಗಳನ್ನು ನೀಡುವುದು, ಕುಡಿಯುವ ನೀರು, ಬೀದಿದೀಪದ ವ್ಯವಸ್ಥೆ, ಯುಜಿಡಿ ಸಮಸ್ಯೆ ನಿವಾರಣೆ, ನೈರ್ಮಲ್ಯ, ತೆರಿಗೆ ವಸೂಲಾತಿ, ಮಳಿಗೆಗಳ ಬಾಡಿಗೆ ವಸೂಲಾತಿ ಹಾಗೂ ಇತರೆ ಸಮಸ್ಯೆಗಳಿಗೆ ಅಯಾಯ ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಿ ಸಮಸ್ಯೆಗಳನ್ನು ಬಗೆಹರಿಸಿ ನಿರ್ವಹಿಸಲು ಸೂಚಿಸಿದೆ. ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿ ವರ್ಗದವರು ತಮ್ಮ ವ್ಯಾಪ್ತಿಗೆ ಬರುವ ವಲಯಕಚೇರಿಯಲ್ಲಿ ನಿರ್ದಿಷ್ಟ ಸಮಯದಲ್ಲಿ ಹಾಜರಿದ್ದು, ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಅಹವಾಲುಗಳನ್ನು ಆಲಿಸಿ ಪರಿಹರಿಸಬೇಕು. ವಿಷಯ ನಿರ್ವಾಹಕರು, ಡಿ ದರ್ಜೆ ಸಹಾಯಕರು ಹಾಗೂ ಡಾಟಾ ಎಂಟ್ರಿ ಆಪರೇಟರ್‍ಗಳು ಪೂರ್ಣಾವಧಿಗೆ ಹಾಜರಿದ್ದು, ಕೆಲಸ ನಿರ್ವಹಿಸಲು ಸೂಚಿಸಿರುವುದಾಗಿ ಪಾಲಿಕೆಯು ಸದರಿ “ಹಿಂಬರಹ”ದಲ್ಲಿ ಹೇಳಿದೆ.
ಪಾಲಿಕೆ ಉತ್ತರಿಸಲಿ

       “ಪಾಲಿಕೆಯು ನೀಡಿರುವ “ಹಿಂಬರಹ”ದ ಮಾಹಿತಿಯು ಶಂಕೆಗೆ ಹಾಗೂ ಚರ್ಚೆಗೆ ಎಡೆಮಾಡಿದೆ. ಇಷ್ಟೆಲ್ಲಾ ಸೌಲಭ್ಯಗಳು ದೊರಕುವಷ್ಟು ಸದರಿ ಕಚೇರಿಗಳಲ್ಲಿ ಸ್ಥಳಾವಕಾಶ, ಪೀಠೋಪಕರಣ, ವಿವಿಧ ವಿಭಾಗಗಳ ಕಡತಗಳು, ಶೌಚಾಲಯ, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಕುಳಿತುಕೊಳ್ಳುವ ವ್ಯವಸ್ಥೆ ಇವೆಯೇ? ಅಧಿಕಾರಿಗಳಿಗೆ ನಿಗದಿಪಡಿಸಿರುವ ವೇಳೆ ಯಾವುದು? ಪಾಲಿಕೆ ತಿಳಿಸಿರುವ ಸೌಲಭ್ಯಗಳು ನಿಜಕ್ಕೂ ಲಭಿಸುತ್ತಿವೆಯೇ? ನಿಯೋಜಿತ ಅಧಿಕಾರಿ-ನೌಕರರು ದಿನವೂ ಕಡ್ಡಾಯವಾಗಿ ಹಾಜರಿರುತ್ತಾರೆಯೇ? ಎಲ್ಲ ಸೇವೆ-ಸೌಲಭ್ಯಗಳು ಇಲ್ಲೇ ದೊರಕುವುದಾದರೆ ಸಾರ್ವಜನಿಕರು ಮತ್ತು ಪಾಲಿಕೆ ಸದಸ್ಯರು ಪ್ರತಿಯೊಂದು ಕೆಲಸಕ್ಕೂ ಪಾಲಿಕೆಯ ಮುಖ್ಯ ಕಚೇರಿಗೆ ಅಲೆದಾಡುತ್ತಿರುವುದೇಕೆ? ಎಂಬಂತಹ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿದ್ದು, ಒಟ್ಟಾರೆ ಪಾಲಿಕೆಯ ಉತ್ತರವು ವಿವಾದಕ್ಕೆಡೆಮಾಡಿಕೊಟ್ಟಿದೆ” ಎಂದು ಆರ್. ವಿಶ್ವನಾಥನ್ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link