ದೇವೇಗೌಡರ ಸೋಲಿಗೆ ಕಾರಣಗಳು

ತುಮಕೂರು

     ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ಸೋತುಬಿಟ್ಟರಲ್ಲ ಎಂಬ ಕೊರಗು ಆ ಪಕ್ಷದ ಕೆಲವರಲ್ಲಿದ್ದು, ಆ ಬಗ್ಗೆಯೇ ಈಗ ಆತ್ಮಾವಲೋಕನಗಳು ನಡೆಯುತ್ತಿವೆ. ಸೋಲಿಗೆ ಕಾರಣಗಳು ಹಲವು ಇರಬಹುದು. ಜಿಲ್ಲೆಯ ಕಾಂಗ್ರೆಸ್‍ನಲ್ಲಿ ಪ್ರಮುಖ ಪ್ರಭಾವಿ ನಾಯಕರಾಗಿದ್ದ ಕೆ.ಎನ್.ರಾಜಣ್ಣ ಅವರನ್ನು ವಿಶ್ವಾಸಕ್ಕೆ ಪಡೆಯದೇ ಇರುವುದು ಸಹ ಮೈತ್ರಿ ಸೋಲಿಗೆ ಒಂದು ಕಾರಣ. ಏಕೆಂದರೆ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಬರಬೇಕಾಗಿದ್ದ ಮತಗಳು ಬಿಜೆಪಿ ಪಾಲಾಗಿರುವುದನ್ನು ಗಮನಿಸಿದರೆ ಕೆಎನ್‍ಆರ್ ವರ್ಚಸ್ಸಿನ ಅರಿವಾಗುತ್ತದೆ.

     ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಮುನ್ನಡೆಯ ಮತಗಳನ್ನು ಗಮನಿಸಿದರೆ ಮಧುಗಿರಿಯಲ್ಲೇ ಅತಿ ಹೆಚ್ಚಿನ ಮತಗಳು ಬಿಜೆಪಿ ಪಾಲಾಗಿವೆ. 2014ರಲ್ಲಿ ಮಧುಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ 38 ಸಾವಿರಕ್ಕೂ ಹೆಚ್ಚು ಅಂತರದ ಮತಗಳು ಲಭ್ಯವಾಗಿದ್ದನ್ನು ಇಲ್ಲಿ ಗಮನಿಸಬಹುದು.

     ಕಳೆದ ಬಾರಿ ಕೇವಲ 22 ಸಾವಿರ ಮತಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ಅಲ್ಲಿ 72,911 ಮತಗಳನ್ನು ಪಡೆದಿದೆ. ಇದಕ್ಕೆ ಕಾರಣ ಏನೆಂಬುದು ಸ್ಪಷ್ಠವಾಗುತ್ತದೆ. ಬಿಜೆಪಿಯ ಅಸ್ತಿತ್ವ ಅಷ್ಟಾಗಿ ಇಲ್ಲದ ಆ ಭಾಗದಲ್ಲಿ ಇಷ್ಟೊಂದು ಮತಗಳು ಲಭ್ಯವಾಗಿವೆ ಎಂದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುಖಂಡರು ಕೆ.ಎನ್.ರಾಜಣ್ಣ ಅವರನ್ನು ಉಪೇಕ್ಷೆ ಮಾಡಿರುವುದೇ ಸ್ಪಷ್ಟ ಕಾರಣ. ಜಿಲ್ಲಾ ಉಸ್ತುವಾರಿ ಸಚಿವರು, ಜೆಡಿಎಸ್ ಪ್ರಮುಖರು ಕೆ.ಎನ್.ಆರ್ ಅವರನ್ನು ನಿರ್ಲಕ್ಷಿಸದೆ ಸಹಕಾರ ಕೋರಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲವೇನೋ…?

     ಹಾಲಿ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಟಿಕೆಟ್ ತಪ್ಪುತ್ತದೆ ಎಂಬ ವಿಷಯ ಗೊತ್ತಾದಾಗ ಹಾಗೂ ಈ ಕ್ಷೇತ್ರದಿಂದ ಜೆಡಿಎಸ್ ಸ್ಪರ್ಧೆ ಎಂಬ ಮಾಹಿತಿ ತಿಳಿದ ಕೂಡಲೇ ಕೆ.ಎನ್.ರಾಜಣ್ಣ ರೆಬೆಲ್ ಆಗಿದ್ದರು. ತಾನೂ ಸಹ ಸ್ಪರ್ಧಿಸುವುದಾಗಿ ಹೇಳಿ ಅದರಂತೆ ನಾಮಪತ್ರವನ್ನೂ ಹಾಕಿದ್ದರು. ಮುದ್ದಹನುಮೇಗೌಡರು ಸಹ ನಾಮಪತ್ರ ಹಾಕುವಂತೆ ನೋಡಿಕೊಂಡರು. ಈ ಸಂದರ್ಭದಲ್ಲಾದರೂ ಇವರನ್ನು ಓಲೈಸುವ ಕೆಲಸ ಆಗಬೇಕಿತ್ತು.

   ಆದರೆ ಸಿದ್ದರಾಮಯ್ಯ ಅವರ ಅಣತೆಯಂತೆ ಮೈತ್ರಿಗೆ ಚ್ಯುತಿ ಬಾರದಿರಲಿ ಎಂದೆನಿಸಿ ತಮ್ಮ ನಾಮಪತ್ರ ವಾಪಸ್ ತೆಗೆದರು. ಮುದ್ದಹನುಮೇಗೌಡರ ನಾಮಪತ್ರವನ್ನು ವಾಪಸ್ಸು ತೆಗೆಸಿದರು. ಆನಂತರವೂ ಸೌಜನ್ಯಕ್ಕಾದರೂ ಮೈತ್ರಿ ಮುಖಂಡರು ಅವರನ್ನು ಸಂಪರ್ಕಿಸುವ, ಪ್ರಚಾರದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವ ಔದಾರ್ಯತೆಯನ್ನು ತೋರಲೇ ಇಲ್ಲ. ಈ ಎಲ್ಲ ಕಾರಣಗಳಿಂದಾಗಿ ಕೆ.ಎನ್.ಆರ್ ತಟಸ್ಥರಾಗಿಯೇ ಉಳಿದು ಬಿಟ್ಟರು.

    ಕೆ.ಎನ್.ಆರ್ ಹಾಗೂ ಎಸ್.ಪಿ.ಎಂ ಅವರನ್ನು ಕ್ಯಾರೇ ಅನ್ನದ ಪರಿಸ್ಥಿತಿಯಿಂದಾಗಿ ಬಿಜೆಪಿಗೆ ಲಾಭವಾಯಿತು. ಜಿ.ಎಸ್.ಬಸವರಾಜು ಈ ಜಿಲ್ಲೆಯ ಚಾಣಕ್ಷ ರಾಜಕಾರಣಿ. ಯಾವ ಮೂಲೆಯಲ್ಲಿ ಯಾವ ಅಮೂಲ್ಯ ವಸ್ತು ಇದೆಯೆಂಬುದನ್ನು ಸುಲಭವಾಗಿ ಗುರ್ತಿಸಬಲ್ಲಂತಹ ಸೂಕ್ಷ್ಮ ರಾಜಕಾರಣಿ. ಅದರಲ್ಲಿ ಅವರು ನಿಷ್ಣಾತರು. ಈ ಚಾಣಾಕ್ಷ ನಡೆಯೇ ಅವರನ್ನು 5 ಬಾರಿ ಸಂಸತ್ ಪ್ರವೇಶಿಸುವಂತೆ ಮಾಡಲು ಕಾರಣವಾಗಿದೆ.

     8 ವಿಧಾನಸಭಾ ಕ್ಷೇತ್ರಗಳ ಪೈಕಿ ತುರುವೇಕೆರೆಯಲ್ಲಿ 19,784 ಮತಗಳು ಜೆಡಿಎಸ್‍ಗೆ ಲೀಡ್ ಕೊಟ್ಟಿರುವುದನ್ನು ಬಿಟ್ಟರೆ ಉಳಿದ ಯಾವ ಕಡೆಗಳಲ್ಲೂ ಹೆಚ್ಚಿನ ಮತಗಳು ಲಭ್ಯವಾಗಿಲ್ಲ. ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್‍ಗೆ 6988 ಮುನ್ನಡೆಯ ಮತಗಳು, ಕೊರಟಗೆರೆಯಲ್ಲಿ 4270, ಸೇರಿದರೆ ಕೇವಲ ಮೂರು ಕ್ಷೇತ್ರಗಳಲ್ಲಿ ಮಾತ್ರವೇ ಜೆಡಿಎಸ್ ಹೆಚ್ಚಿನ ಮತಗಳ ಅಂತರ ಕಾಯ್ದುಕೊಂಡು ತೃಪ್ತಿ ಪಟ್ಟುಕೊಂಡಿದೆ.

      ಇದಕ್ಕೆ ಬದಲಾಗಿ ಬಿಜೆಪಿ ಐದು ಕ್ಷೇತ್ರಗಳಲ್ಲಿ ಮುನ್ನಡೆಯ ಮತಗಳನ್ನು ಕಾಯ್ದುಕೊಂಡಿದೆ. ಆ ಪಕ್ಷವು ತಿಪಟೂರು, ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ ಮತ್ತು ಮಧುಗಿರಿಯಲ್ಲಿ ಹೆಚ್ಚಿನ ಮತಗಳ ಅಂತರ ಗಳಿಸುವಲ್ಲಿ ಯಶಸ್ವಿಯಾಗಿದೆ.
ಒಟ್ಟಾರೆ ಬಿಜೆಪಿ 43,400 ಮುನ್ನಡೆಯ ಮತಗಳ ಅಂತರ ಮತ್ತು ಜೆಡಿಎಸ್ 31000 ಮುನ್ನಡೆಯ ಮತಗಳ ಅಂತರ ಪಡೆದು ಬಿಜೆಪಿ 12,370 ಮತಗಳ ಮುನ್ನಡೆಯೊಂದಿಗೆ ಜಯ ಸಾಧಿಸಿದೆ.

      ಹಿಂದಿನ ರಾಜಕಾರಣವನ್ನೊಮ್ಮೆ ಅವಲೋಕಿಸಿದರೆ ಬೆಳ್ಳಾವಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಕೆ.ಎನ್.ಆರ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೆ ಎಚ್‍ಡಿ ದೇವೇಗೌಡರು. ಇದಕ್ಕೆ ಪ್ರತಿಯಾಗಿ ಇಬ್ಬರ ನಡುವೆ ಸಂಪರ್ಕ ಸಾಧ್ಯವಾಗಿದ್ದರೆ, ಅದರ ಅನುಕೂಲತೆಗಳು ಮೈತ್ರಿ ಪಾಲಾಗುತ್ತಿತ್ತು.
ಈ ಬಾರಿ ಇಡೀ ರಾಷ್ಟ್ರದಲ್ಲಿ ಮೋದಿ ಅಲೆ ವ್ಯಾಪಿಸಿದ್ದು, ಇದನ್ನು ಯಾರೂ ತಡೆಯಲಾಗಲಿಲ್ಲ. ಅಶ್ವಮೇಧ ಕುದುರೆಯನ್ನು ತಡೆಯುವ ಲವಕುಶರೇ ಇಲ್ಲವಾದರು. 

      18 ರಿಂದ 30 ವರ್ಷ ವಯೋಮಾನದ ಯುವಕರು ರಾಷ್ಟ್ರಾಧ್ಯಂತ ಮೋದಿ ಅಲೆಯನ್ನು ಎಬ್ಬಿಸಿದ ಪರಿಣಾಮವಾಗಿ ಬಿಜೆಪಿ ಈ ಬಾರಿ ಇತಿಹಾಸ ದಾಖಲಿಸಿತು. ಇದು ಎಲ್ಲ ಕಡೆಯೂ ವ್ಯಾಪಿಸಿತ್ತು. ಒಂದು ಕಡೆ ಮೋದಿ ಅಲೆ ಮತ್ತೊಂದು ಕಡೆ ಮೈತ್ರಿಯೊಳಗೆ ಬಿರುಕು – ಅತೃಪ್ತರನ್ನು ಓಲೈಕೆ ಮಾಡದೇ ಹೋದ ಪರಿಣಾಮ ಸೋಲಿಗೆ ದಾರಿಯಾಯಿತು.


         ಜಿ.ಎಸ್.ಬಸವರಾಜು ಈ ಜಿಲ್ಲೆಯ ಚಾಣಾಕ್ಷ ರಾಜಕಾರಣಿ. ಮುಖಂಡರುಗಳ ನಾಡಿಮಿಡಿತ ಬಲ್ಲವರು. ಅಬ್ಬರದ ಪ್ರಚಾರಗಳಿಗಿಂತ ಹೆಚ್ಚಾಗಿ ಯಾರನ್ನು ಹೇಗೆ ಓಲೈಸಬೇಕು, ಅವರ ಮತಗಳನ್ನು ಹೇಗೆ ಪಡೆಯಬೇಕು ಎಂಬುದನ್ನು ಚೆನ್ನಾಗಿ ಬಲ್ಲವರು. ಅಂತಹ ಮತವರ್ಗವನ್ನು ಅವರು ಹೊಂದಿದ್ದಾರೆ.

          ಇದರ ಜೊತೆಗೆ ಈ ಬಾರಿ ಎಲ್ಲ ಕಡೆ ಮೋದಿ ಅಲೆ ಸೃಷ್ಠಿಯಾಯಿತು. ಮಧುಗಿರಿಯಲ್ಲಿ ಸ್ಥಳೀಯ ರಾಜಕಾರಣದ ವಿರೋಧಿ ನಿಲುವು ಜಿ.ಎಸ್.ಬಸವರಾಜು ಪರ ಕೆಲಸ ಮಾಡಿತು. ಕೆ.ಎನ್.ರಾಜಣ್ಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸಿದ್ದಲ್ಲಿ ಮೈತ್ರಿ ಅಭ್ಯರ್ಥಿಯ ಹಾದಿ ಸುಗಮವಾಗುತ್ತಿತ್ತು.


   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap