ಈ ಲೋಕಸಭಾ ಚುನಾವಣೆ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಅಗ್ನಿಪರೀಕ್ಷೆ : ಡಿ.ಸುಧಾಕರ್

ಹಿರಿಯೂರು :

       ಈ ಲೋಕಸಭಾ ಚುನಾವಣೆ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಅಗ್ನಿಪರೀಕ್ಷೆ ಇದ್ದಂತೆ ಇದರಲ್ಲಿ ನಾವು ಗೆಲ್ಲುವ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ ಎಂಬುದಾಗಿ ಮಾಜಿ ಶಾಸಕ ಡಿ.ಸುಧಾಕರ್ ಹೇಳಿದರು.ನಗರದ ನಾಗನಾಯಕನಹಟ್ಟಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್.ಚಂದ್ರಪ್ಪ ಸರಳ, ಸಜ್ಜನಿಕೆಗೆ ಹೆಸರಾದವರು ಸಣ್ಣ ಕಪ್ಪುಚುಕ್ಕೆಗೂ ಅವಕಾಶವಿಲ್ಲದಂತೆ ಐದು ವರ್ಷ ಸಂಸತ್ ಸದಸ್ಯರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದ್ದರಿಂದ ಇಂತಹ ವ್ಯಕ್ತಿಯನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಲು ಎರಡೂ ಪಕ್ಷದ ಮುಖಂಡರು ಕಾರ್ಯಕರ್ತರು ಶ್ರಮಿಸೋಣ ಎಂದು ಅವರು ಮನವಿ ಮಾಡಿದರು.

         ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿ ಬಿ.ಎಚ್.ಮಂಜುನಾಥ್ ಮಾತನಾಡಿ, ಕೋಮುವಾದಿ ಪಕ್ಷವನ್ನು ದೂರವಿಡುವ ಏಕೈಕ ಉದ್ದೇಶದಿಂದ ರಾಜ್ಯದಲ್ಲಿ ಎರಡೂ ಜಾತ್ಯತೀತ ಪಕ್ಷಗಳು ಒಂದಾಗಿದ್ದು, ರೈತಪರ ಜನಪರವಾಗಿ ರಾಜ್ಯಸರ್ಕಾರ ಆಡಳಿತ ನಡೆಸುತ್ತಿದ್ದು, ಜನಾಭಿಪ್ರಾಯ ನಮ್ಮ ಪರವಾಗಿದೆ. ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

         ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ ಮಾತನಾಡಿ, ಸುಳ್ಳು ಆಶ್ವಾಸನೆಗಳ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಈ ದೇಶದ ಬಡ ರೈತರ ನೆರವಿಗೆ ಏನೂ ಮಾಡಲಿಲ್ಲ. ಆದರೆ ಪದೇ ಪದೇ ಮರುಳು ಮಾಡಲು ಸಾಧ್ಯವಿಲ್ಲ. ಈ ಬಾರಿ ಮೋದಿಯವರ ಪೊಳ್ಳು ಮಾತುಗಳಿಗೆ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂಬುದಾಗಿ ಭವಿಷ್ಯ ನುಡಿದರು.

         ಈ ಸಭೆಯಲ್ಲಿ ಕೆಪಿಸಿಸಿ ಸದಸ್ಯ ಎ.ಎಂ.ಅಮೃತೇಶ್ವರಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ನಾಗೇಂದ್ರನಾಯ್ಕ್, ಸಿ.ಬಿ.ಪಾಪಣ್ಣ, ಶಶಿಕಲಾಸುರೇಶ್‍ಬಾಬು, ಗೀತಾನಾಗಕುಮಾರ್, ಶಿವಪ್ರಸಾದಗೌಡ, ಕೆ.ಮಂಜುನಾಥ್, ಮುನೀರ್‍ಮುಲ್ಲಾ ಈ ಸಂದರ್ಭದಲ್ಲಿ ಎಸ್.ಚಂದ್ರಪ್ಪ, ಡಾ.ಸುಜಾತ, ಎ.ಮಂಜುನಾಥ್, ಇ.ಮಂಜುನಾಥ್. ಎ.ಪಾಂಡುರಂಗ, ಕಲ್ಲಟ್ಟಿ ತಿಪ್ಪೇಸ್ವಾಮಿ, ಖಾದಿರಮೇಶ್, ಸಾದತ್‍ಉಲ್ಲಾ, ಓಂಕಾರಪ್ಪ, ಮುಕುಂದ, ಚಮನ್, ಷರೀಫ್, ಸಲಾವುದ್ದೀನ್, ಶಾರಮ್ಮ, ಎಚ್.ಚಂದ್ರಪ್ಪ, ಪದ್ಮನಾಭ್, ಎಂ.ಡಿ.ರವಿ, ಶಿವಣ್ಣ, ಕರಿಬಸಪ್ಪ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap