ಬೆಂಗಳೂರು:
ಭ್ರಷ್ಟ್ರ ಅಧಿಕಾರಿಗಳ ವಿರುದ್ಧ ಮತ್ತಷ್ಟು ಕ್ರಮಕ್ಕೆ ಲೋಕಾಯುಕ್ತ ಮುಂದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಹರಿದಾಡುವ ಆಡಿಯೋ-ವಿಡಿಯೋಗಳ ಪರಿಶೀಲಿಸಿ ತ್ವರಿತ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ.ಈ ನಿಟ್ಟಿನಲ್ಲಿ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಪ್ರಕರಣವೊಂದಲ್ಲಿ ಅಧಿಕಾರಿಯೋರ್ವರನ್ನು ಅಮಾನತು ಮಾಡಿದೆ.ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಮಂಗಲ ಕಂದಾಯ ವೃತ್ತದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿ ಅಂಬಲಿ ಪೂಜಾ ಅವರನ್ನು ಶನಿವಾರ ಅಮಾನತುಗೊಳಿಸಲಾಗಿದೆ.
ಉಪ ಲೋಕಾಯುಕ್ತರು ಬೆಂಗಳೂರು ಗ್ರಾಮಾಂತರ ಉಪ ಆಯುಕ್ತ ಎ ಬಿ ಬಸವರಾಜು ಅವರೊಂದಿಗೆ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ ಕೆಲವೇ ಗಂಟೆಗಳ ನಂತರ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ನೆಲಮಂಗಲದ ಬೈರಸಂದ್ರ ಕಂದಾಯ ವೃತ್ತದಲ್ಲಿ ಮಹಿಳೆಯೊಬ್ಬರ ಜಮೀನಿನ ಖಾತಾ ನೀಡಲು ಪೂಜಾ ಅವರು 60,000 ರೂ. ಬೇಡಿಕೆ ಇಟ್ಟಿದ್ದರು ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಬಳಿಕ ಉಪ ಲೋಕಾಯುಕ್ತರು ಇಬ್ಬರೂ ಜಿಲ್ಲಾಧಿಕಾರಿಯನ್ನು ವಿಚಾರಿಸಿ, ಯಾವುದೇ ಕ್ರಮ ಕೈಗೊಳ್ಳದ ಕಾರಣ ಎಲ್ಲಾ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ನಂತರ, ಜಿಲ್ಲಾಧಿಕಾರಿ ಪೂಜಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದರು.
ಬಳಿಕ ಕೋಲಾರದಲ್ಲಿ ಅಧಿಕಾರಿಯೊಬ್ಬರು ಲಂಚ ಕೇಳುತ್ತಿರುವ ವಿಡಿಯೋ ಕೂಡ ವೈರಲ್ ಆಗಿದ್ದು, ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕೋಲಾರ ಜಿಲ್ಲಾಧಿಕಾರಿಗೆ ಸೂಚಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ವೀರಪ್ಪ ಅವರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಬಲವಾದ ಪುರಾವೆಗಳಿದ್ದರೂ, ಸಮರ್ಥ ಅಧಿಕಾರಿಗಳು ಶಿಸ್ತು ಕ್ರಮ ತೆಗೆದುಕೊಳ್ಳುವ ಬದಲು ಮೂಕ ಪ್ರೇಕ್ಷಕರಾಗಿರುವುದು ನ್ಯಾಯಯುತವಲ್ಲ. ಆದ್ದರಿಂದ, ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸುವುದು ಅನಿವಾರ್ಯವಾಗಿತ್ತು ಎದು ಹೇಳಿದ್ದಾರೆ.
