ಮಂಗಳೂರು:
ಲೋಕಾಯುಕ್ತ ಅಧಿಕಾರಿಯೆಂದು ಬಿಂಬಿಸಿ ವಾಟ್ಸಾಪ್ ಮೂಲಕ ಹಣ ವಸೂಲಿಗೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.
ಮಂಗಳೂರಿನ ಪೊಲೀಸ್ ಆಯುಕ್ತರ ಪತ್ರಿಕಾ ಪ್ರಕಟಣೆ ಪ್ರಕಾರ, ಧನಂಜಯ ರೆಡ್ಡಿ ತೋಟ (31) ಎಂಬಾತ ಲೋಕಾಯುಕ್ತ ಅಧಿಕಾರಿಯ ಸೋಗಿನಲ್ಲಿ ಪಂಚಾಯಿತಿ ಅಧಿಕಾರಿ ಪುರುಷೋತ್ತಮ್ ಅವರಿಗೆ ಕರೆ ಮಾಡಿದ್ದಾನೆ. ಆಪಾದಿತ ಭ್ರಷ್ಟಾಚಾರ ಪ್ರಕರಣವನ್ನು ಪರಿಹರಿಸಲು ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ.ಈ ಬಗ್ಗೆ ಅನುಮಾನಗೊಂಡ ಪುರುಷೋತ್ತಮ್ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕರೆ ಮಾಡಿದ್ದನ್ನು ಪತ್ತೆಹಚ್ಚಿದ ಪೊಲೀಸರು, ಆಂಧ್ರ ಪ್ರದೇಶಕ್ಕೆ ತೆರಳಿ ಅಲ್ಲಿ ಶನಿವಾರ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿಯು ಲೋಕಾಯುಕ್ತ ಸಂಸ್ಥೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕಾನೂನು ಕ್ರಮ ಕೈಗೊಳ್ಳುವುದಾಗಿ ಹೆದರಿಸಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ತೋಟ ಬೇರೆ ಕಡೆಯೂ ಇದೇ ರೀತಿ ವಂಚನೆ ನಡೆಸಿದ್ದಾನಾ ಎಂಬ ಬಗ್ಗೆ ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ತೋಟ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.