ಲೋಕಸಭೆ ಚುನಾವಣೆ ಫಲಿತಾಂಶ :ಮತ್ತೆ ಮುನ್ನೆಲೆಗೆ ಬಂತು ಹೆಚ್ಚುವರಿ ಡಿಸಿಎಂ ವಿಚಾರ

ಬೆಂಗಳೂರು: 

    ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಮತ್ತೆ ಹೆಚ್ಚುವರಿ ಡಿಸಿಎಂ ಬೇಡಿಕೆ ಮುನ್ನಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದ ಸಹೋದ್ಯೋಗಿಗಳು, ವಿಶೇಷವಾಗಿ ಅವರ ನಿಷ್ಠಾವಂತರು ಸರ್ಕಾರದಲ್ಲಿ ಹೆಚ್ಚಿನ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವ ವಿಷಯವನ್ನು ಮತ್ತೆ ಪ್ರಸ್ತಾಪಿಸುತ್ತಿದ್ದಾರೆ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಪ್ರತಿಪಕ್ಷ ಬಿಜೆಪಿಗೆ ಸಾಕಷ್ಟು ಅವಕಾಶ ಮಾಡಿ ಕೊಡುತ್ತಿದ್ದಾರೆ.

   ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಿದರೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಇದರ ಜೊತೆಗೆ ಅವರು ವಿವಿಧ ಸಮುದಾಯದ ಮೂವರು ನಾಯಕರಿಗೆ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಬೇಡಿಕೆಯನ್ನು ಮುಂದಿರಿಸಿದ್ದಾರೆ.

   ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೂರು ಬಾಗಿಲುಗಳ ಮನೆ ಎಂಬಂತಾಗಿದೆ. ಸರ್ಕಾರದಲ್ಲಿ ಸಿಎಂ, ಡಿಸಿಎಂ ಹುದ್ದೆಗಳಿಗೆ ಪೈಪೋಟಿ ಜೋರಾಗಿದ್ದು, ಸರ್ಕಾರದೊಳಗಿನ ಒಳ ಜಗಳ ಬೂದಿ ಮುಚ್ಚಿದ ಕೆಂಡದಂತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರೇ, ನಿಮ್ಮ ಕುರ್ಚಿಯ ಪೈಪೋಟಿ ಯಾವಾಗ ನಿಲ್ಲುತ್ತದೆ ಹೇಳಿ?, ಕರ್ನಾಟಕದ ಅಭಿವೃದ್ಧಿಯ ಗ್ರಹಣ ಯಾವಾಗ ಕೊನೆಗೊಳ್ಳುತ್ತದೆ ಎಂದು ರಾಜ್ಯ ಬಿಜೆಪಿ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದೆ. 

    ಲೋಕಸಭೆ ಚುನಾವಣೆಗೂ ಮುನ್ನ ಈ ವಿಷಯ ಪ್ರಸ್ತಾಪಿಸಿದ ರಾಜಣ್ಣ, ಕಾಂಗ್ರೆಸ್‌ ಹೈಕಮಾಂಡ್‌ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಈಗಿನ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಜೊತೆಗೆ ಇನ್ನೂ ಮೂವರು ಡಿಸಿಎಂಗಳನ್ನು ನೇಮಿಸಬೇಕು ಎಂದಿದ್ದರು.

    ಆಗ ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ಹೆಸರು ಚರ್ಚೆಯಾಯಿತು. ಪಕ್ಷದ ದಲಿತ ಮುಖಂಡರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಔತಣಕೂಟ ನಡೆಸಿದ್ದರು.ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಐಸಿಸಿ ಹೈಕಮಾಂಡ್ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಪ್ರಸ್ತಾಪಿಸದಂತೆ ತಾಕೀತು ಮಾಡಿದ್ದರಿಂದ ಅದು ಅಲ್ಲಿಗೆ ನಿಂತಿತ್ತು.

   ರಾಜಣ್ಣ ಅವರನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಪಾಳಯದಲ್ಲಿ ಈಗ ಮತ್ತೊಮ್ಮೆ ಈ ವಿಷಯ ಪ್ರಸ್ತಾಪಿಸುವ ಸಾಧ್ಯತೆ ಇದೆ. ಈ ಬೆಳವಣಿಗೆಯನ್ನು ಹೈಕಮಾಂಡ್ ಗಮನಿಸಿದ್ದು, ರಾಜಣ್ಣ ಅವರಿಗೆ ಮತ್ತೊಂದು ಸುತ್ತಿನ ಎಚ್ಚರಿಕೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link