ಪೊಲೀಸ್‌ ಇಲಾಖೆ : ಶೀಘ್ರದಲ್ಲಿಯೇ ಅಂತರ್‌ ಜಿಲ್ಲಾ ವರ್ಗಾವಣೆ ಆರಂಭ : ಗೃಹ ಸಚಿವ

ಬೆಂಗಳೂರು: 

    ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು. ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದಿತು. ಕಳೆದ ಎರಡು ತಿಂಗಳು ಸರ್ಕಾರದ ಯಾವುದೇ ರೀತಿಯ ಕೆಲಸ ಕಾರ್ಯಗಳು ಸಾಧ್ಯವಾಗಿಲ್ಲ. ಈಗ ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡುತ್ತೇವೆ ಎಂದು ಹೇಳಿದರು.

    ಕಾಂಗ್ರೆಸ್‌ನಲ್ಲಿ ಹಿರಿಯರನ್ನು ಪರಿಗಣಿಸುತ್ತಿಲ್ಲ ಎಂಬ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಆ ರೀತಿ ಏನು ಇಲ್ಲ. ಸಂದರ್ಭ ಅನುಸಾರ ಅಂತಹ ಮಾತುಗಳನ್ನು ಹೇಳಿರುತ್ತೀವಿ. ನಮ್ಮಲ್ಲಿ ಒಳ ಜಗಳಗಳು ಆಗಿಲ್ಲ. ತುಮಕೂರಿನ ಶಾಸಕ ಸುರೇಶ್‌ಗೌಡ, ನಮ್ಮ‌ ಪಕ್ಷದಲ್ಲಿನ ಒಳ ಜಗಳವನ್ನು ಎಲ್ಲಿ ನೋಡಿದ್ದಾರೋ, ಎಲ್ಲಿ ಆಗಿದೆಯೋ ಅವರಿಗೆ ಗೊತ್ತು. ಯಾವುದಾದರು ವಿಚಾರಗಳು ಬಂದಾಗ ಒಬ್ಬೊಬ್ಬರು ಅಭಿಪ್ರಾಯಗಳನ್ನು ಹಂಚಿಕೊಂಡಿರುವುದು ಸಹಜ. ಅಂತಹ ಸಂದರ್ಭದಲ್ಲಿ ಬಿಟ್ಟರೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಒಳ ಜಗಳಗಳಿಲ್ಲ ಎಂದು ಸ್ಪಷ್ಟಪಡಿಸಿದರು. 

    ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಹಂಚಿಕೊಳ್ಳಲು ಕ್ಯಾಬಿನೆಟ್ ಇದೆ. ಪಕ್ಷಕ್ಕೆ ಸಂಬಂಧಪಟ್ಟ ತೀರ್ಮಾನಗಳನ್ನು ಕೈಗೊಳ್ಳಲು ಕೋರ್‌ಕಮಿಟಿ ಸಭೆ ಮಾಡಬಹುದು. ಇದಕ್ಕೆ ಅವಕಾಶಗಳನ್ನು ಪಕ್ಷದ ಅಧ್ಯಕ್ಷರು ಕೊಡಬೇಕಾಗುತ್ತದೆ. ಸಂದರ್ಭ ಬಂದಾಗ ಅವರು ಮಾಡುತ್ತಾರೆ ಎಂದರು. ಪ್ರಬಲ ಸಚಿವರ ಕ್ಷೇತ್ರಗಳಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿರುವುದಕ್ಕೆ ಸಮಿತಿ ರಚನೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಜಿಲ್ಲೆ ಸೇರಿದಂತೆ 17 ಜಿಲ್ಲೆಗಳಲ್ಲಿ ಸೋತಿದ್ದೇವೆ. ಈ ಬಗ್ಗೆ ಪರಿಶೀಲನೆ ಮಾಡುವ, ಆತ್ಮಾವಲೋಕನಾ ಮಾಡಿಕೊಳ್ಳುವ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ನಾವೆಲ್ಲ ಅದನ್ನು ಒಪ್ಪುತ್ತೇವೆ. ಮುಂದೆ ನಮಗೆ ಏನು ಸಲಹೆ ಮಾಡುತ್ತಾರೆ. ಅದನ್ನು ಪಾಲನೆ ಮಾಡುವ ಪದ್ಧತಿ ನಮ್ಮ ಪಕ್ಷದಲ್ಲಿದೆ ಎಂದು ಹೇಳಿದರು.

    ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಬಿಜೆಪಿಯವರು ಹೇಳಿದ್ದಕ್ಕೆಲ್ಲ ಎಸ್ ಅನ್ನೋದಿಕ್ಕೆ ಆಗಲ್ಲ. ತನಿಖೆ ಪ್ರಾರಂಭ ಮಾಡಿದ್ದೇವೆ. ಬ್ಯಾಂಕ್‌ನಲ್ಲಿ ಫ್ರಾಡ್ ಆಗಿದೆ ಅಂತ ಸಿಬಿಐನವರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಆಗಲಿ. ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ಎಸ್ಐಟಿಗೆ ಸೂಚಿಸಿದ್ದೇವೆ. ತನಿಖೆ ವಿಚಾರದಲ್ಲಿ ಅಧಿಕಾರಿಗಳಿಗೆ ಒತ್ತಾಯ ಮಾಡಲು ಆಗುವುದಿಲ್ಲ. ಅವರ ತನಿಖೆಗೆ ಸಮಯ ಕೊಡಬೇಕಾಗುತ್ತದೆ. ಏನೆಲ್ಲ ಹೇಳಿಕೆಗಳು ಬರುತ್ತವೆ ಪರಿಶೀಲಿಸುತ್ತಾರೆ. ಸಿಬಿಐನವರು ಅಧಿಕೃತವಾಗಿ ಯಾವುದೇ ಪತ್ರ ಬರೆದಿಲ್ಲ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap