ದಾವಣಗೆರೆ:
ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ವಾಹನಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಲಾರಿಯೊಂದು ಡಿಕ್ಕಿ ಹೊಡೆದು ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಹೆಬ್ಬಾಳು ಗ್ರಾಮದ ಟೋಲ್‌ಗೇಟ್ ಬಳಿ ಮಂಗಳವಾರ ನಡೆದಿದೆ.ಮೂಲತಃ ಬಾಗಲಕೋಟೆ ಜಿಲ್ಲೆಯ ಹಿಬ್ಬರಗಿ ಇಂಡಿ ಗ್ರಾಮದ (೩೩) ಮೃತಪಟ್ಟ ಪೊಲೀಸ್ ಪೇದೆ. ಲಾರಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಕರೆದೊಯ್ದು ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
ನಗರದ ಡಿಎಆರ್‌ನಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಪ್ಪ ಪೂಜಾರಿ ಅವರನ್ನು ಹೆಬ್ಬಾಳು ಟೋಲ್‌ಗೇಟ್ ಬಳಿ ಲೈನ್ ಡಿಸಿಪ್ಲಿನ್ ಡ್ಯೂಟಿಗೆ ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಬರುತ್ತಿದ್ದ ಲಾರಿ ಎದುರಿಗೆ ನಿಂತು ನಿಲ್ಲಿಸಲು ಸೂಚನೆ ನೀಡಿದರು. ಲಾರಿ ಚಾಲಕ ಲಾರಿ ನಿಲ್ಲಿಸದೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಎರಡು ದಿನಗಳ ಹಿಂದೆ ಪೊಲೀಸ್ ಪೇದೆ ರಾಮಪ್ಪ ಪೂಜಾರಿ, ತನ್ನ ಮಗುವಿನ ಮೊದಲ ವರ್ಷದ ಜನ್ಮದಿನ ಆಚರಣೆ ಮಾಡಿದ್ದರು. ಮೃತ ಪೇದೆಗೆ ಒಂದು ವರ್ಷದ ಮಗು, ಪತ್ನಿ, ತಂದೆ ಮತ್ತು ತಾಯಿ ಇದ್ದಾರೆ. ಈ ಘಟನೆ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
