ಚಳ್ಳಕೆರೆ:
ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಸುರಿದ ಮಳೆಗೆ ವಿವಿಧ ಗ್ರಾಮಗಳಲ್ಲಿ ಮನೆಗಳು ಬಿದ್ದು ನಷ್ಟ ಸಂಭವಿಸಿದ್ದರೆ, ಇನ್ನೂ ಕೆಲವೆಡೆ ಬೆಳೆ ಹಾಗೂ ಮನೆಗಳಿಗೆ ನೀರು ನುಗ್ಗಿ ಸಂಪೂರ್ಣ ನಷ್ಟವಾಗಿರುತ್ತದೆ.
ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊರೆ ಹಟ್ಟಿಯಲ್ಲಿ ಚಿನ್ನಪಾಲಯ್ಯ ಐದು ಎಕರೆ ಪ್ರದೇಶದಲ್ಲಿ ಶೇಂಗಾ ಬಿತ್ತಿದ್ದು, ಕಳೆದ ಮೂರು ದಿನಗಳಿಂದ ಬರುತ್ತಿರುವ ಮಳೆಗೆ ಶೇಂಗಾ ಮತ್ತು ಬಳ್ಳಿ ಕಪ್ಪಾಗಿ ಗಿಡದಲ್ಲಿದ್ದ ಕಾಯಿಗಳು ಸಹ ಉದುರಿ ಹೋಗಿರುತ್ತಿವೆ ಇದರಿಂದ ಸುಮಾರು 50 ಸಾವಿರ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಬೇಡರೆಡ್ಡಿಹಳ್ಳಿ ಗ್ರಾಮದಲ್ಲಿ ಶಿವಲೀಲಾ ಎಂಬುವವರ ಮನೆ ಕುಸಿದು ಸುಮಾರು 10 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ರಾಮಜೋಗಿಹಳ್ಳಿ ಗ್ರಾಮದ ಪಿ.ಕೃಷ್ಣಪ್ಪ ಎಂಬುವವರ ಮನೆ ಮೇಲ್ಛಾವಣಿ ಕುಸಿದು ಬಿದ್ದು ಸುಮಾರು 20 ಸಾವಿರ ನಷ್ಟ ಸಂಭವಿಸಿರುತ್ತದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಅಂದಾಜು ನಡೆಸಿದ್ಧಾರೆ.
ನಗರದ ಮೈರಾಡ ಕಾಲೋನಿ ಬಳಿ ಮಳೆಯ ನೀರು ಸುಮಾರು ಹತ್ತಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ್ದು ಮನೆಯವರು ಗಾಬರಿಯಿಂದ ಹೊರ ಬಂದಿದ್ದಾರೆ. ಮನೆಯಲ್ಲಿ ತುಂಬಿದ್ದ ನೀರನ್ನು ಮನೆಯವರು ಇಡೀ ರಾತ್ರಿ ಎತ್ತಿ ಹೊರಹಾಕಿದ್ದಾರೆ. ನೀರಿನ ಜೊತೆಯಲ್ಲಿ ಹಲವಾರು ವಿಷ ಜಂತುಗಳು ಮಳೆಯ ನೀರಿನಲ್ಲಿ ಮನೆಗೆ ನುಗ್ಗಿ ಆತಂಕವನ್ನುಂಟು ಮಾಡಿರುತ್ತವೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ದೊಡ್ಡೇರಿ ಗ್ರಾಮದ ಹಳ್ಳ ಹರಿಯುತ್ತಿದ್ದು ಹಳ್ಳದಲ್ಲಿ ಗ್ರಾಮಸ್ಥರು ಮೀನು ಹಿಡಿಯಲು ಮುಗಿ ಬಿದಿದ್ದರು.
ಸ್ಥಳೀಯರಾದ ಶಾಂತಮ್ಮ, ಜ್ಯೋತಿ, ಸುಲೋಚನಮ್ಮ, ಲಿಂಗಮ್ಮ, ಮಹೇಶ್‍ಕುಮಾರ್, ಶೈಲಮ್ಮ, ಅನ್ನಪೂರ್ಣಮ್ಮ, ಮಂಜಮ್ಮ ಮುಂತಾದವರು ಮಾತನಾಡಿ, ಮೈರಾಡ ಕಾಲೋನಿಯ ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ಪದೇ ಪದೇ ಮಳೆಯಿಂದ ಎಲ್ಲಾ ವಸ್ತುಗಳನ್ನು ಕಳೆದುಕೊಳ್ಳುವ ಸ್ಥಿತಿ ಬಂದಿದೆ. ನಮಗೆ ಶಾಸಕರು, ನಗರಸಭೆ ಅಧಿಕಾರಿಗಳು ಶಾಶ್ವತ ಪರಿಹಾರ ಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
