ಬೆಂಗಳೂರು
ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಚಲನಚಿತ್ರಗಳಲ್ಲಿ ಚಿತ್ರೀಕರಿಸಿ ಪ್ರದರ್ಶಿಸಿದರೆ ಪ್ರೋತ್ಸಾಹಧನ ನೀಡುವ ಹೊಸ ಕಾರ್ಯಕ್ರಮಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಹಸಿರು ನಿಶಾನೆ ತೋರಿದೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ರೂಪಿಸಲಾಗಿರುವ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದ್ದು, ಯಾವುದೇ ಭಾಷೆಯ ಚಲನಚಿತ್ರಗಳನ್ನು ಪ್ರವಾಸಿ ತಾಣಗಳಲ್ಲಿ ಚಿತ್ರಿಸುವ ಚಿತ್ರಗಳಿಗೆ ಗರಿಷ್ಠ 1 ಕೋಟಿ ರೂ. ಹಾಗೂ ದೊಡ್ಡ ಪ್ರಮಾಣದಲ್ಲಿ ಚಿತ್ರೀಕರಣ ಮಾಡುವ ಚಿತ್ರಗಳಿಗೆ 2.5 ಕೋಟಿ ರೂ. ವರೆಗೆ ಪ್ರೋತ್ಸಾಹಧನ ನೀಡಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ ಎಂದರು.
ಪ್ರೋತ್ಸಾಹ ಧನ ನೀಡುವ ಕ್ರಮ ದಂಧೆಯಾಗಿ ಪರಿವರ್ತನೆಯಾಗುವುದನ್ನು ತಪ್ಪಿಸಲು ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದ್ದು, ಸಹಾಯಧನ ನೀಡಲು ಬಿಗಿ ಕ್ರಮಗಳನ್ನು ಅಳವಡಿಸಲಾಗುವುದು. ಚಲನಚಿತ್ರಗಳಲ್ಲಿ ಪ್ರವಾಸಿ ತಾಣಗಳನ್ನು ತೋರಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕೈಗಾರಿಕೆಗಳನ್ನು ಸ್ಥಾಪಿಸಲು ಬಯಸುವವರಿಗೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸರಳಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಕೈಗಾರಿಕಾ ಸ್ನೇಹಿ ವ್ಯವಸ್ಥೆ ರೂಪಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 95 (2)ಗೆ ತಿದ್ದುಪಡಿ ತರುವ ಪ್ರಸ್ತಾವನೆಗೆ ಸಂಪುಟ ಸಮ್ಮತಿ ನೀಡಿದೆ.
ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬದಲಾಯಿಸಲು ಇದೀಗ ಗರಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ. ಇದನ್ನು ಸುಲಭಗೊಳಿಸಲು ಸರ್ಕಾರ ಮುಂದಾಗಿದ್ದು, ಅರ್ಜಿದಾರರಿಂದ ಭೂ ಪರಿವರ್ತನೆಗೆ ಆನ್ ಲೈನ್ ನಲ್ಲಿ ಅರ್ಜಿ ಪಡೆದು ವಿವಿಧ ಇಲಾಖೆ ಮತ್ತು ಪ್ರಾಧಿಕಾರಗಳ ಅಭಿಪ್ರಾಯಕ್ಕಾಗಿ ಕೋರಿಕೆ ಸಲ್ಲಿಸಲಾಗುವುದು. ಒಂದು ತಿಂಗಳ ಒಳಗಾಗಿ ಅನುಮತಿ ಬಾರದಿದ್ದರೆ ಯಾವುದೇ ರೀತಿಯ ಆಕ್ಷೇಪಣೆಗಳಿಲ್ಲ ಎನ್ನುವ ತೀರ್ಮಾನಕ್ಕೆ ಬಂದು ಭೂ ಪರಿವರ್ತನೆಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದರು.
ನಷ್ಟದಲ್ಲಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವುದು ಸ್ಥಗಿತವಾಗಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವುದನ್ನು ಪರಿಗಣಿಸಿ ಹಾಗೂ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕಾರ್ಖಾನೆ ಪುನರಾರಂಭಕ್ಕೆ ರೂ. 20 ಕೋಟಿ ಸಾಲ ಒದಗಿಸಲು, ಘಟಪ್ರಭ ಎಡದಂಡೆ ನಾಲೆ ಆಧುನೀಕರಣ ಕಾಮಗಾರಿಗೆ 573 ಕೋಟಿ ರೂ. ಮಂಜೂರು ಮಾಡುವ ಪ್ರಸ್ತಾವನೆಗಳಿಗೂ ಸಹ ಅನುಮೋದನೆ ನೀಡಲಾಗಿದೆ.
ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕಿನ ಹಾಡ್ಯ ಗ್ರಾಮದ ಬಳಿ ಕಾವೇರಿ ನದಿಯಿಂದ ಕೆ.ಆರ್. ನಗರ ತಾಲ್ಲೂಕಿನ 12 ಕೆರೆಗಳನ್ನು ತುಂಬಿಸುವ ನೀರೆತ್ತುವ 15 ಕೋಟಿ ರೂ. ಮೊತ್ತದ ಯೋಜನೆ ಹಾಗೂ ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಯಡಹಳ್ಳಿಯಲ್ಲಿ 3.40 ಕೋಟಿ ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಚಿಲ್ಲರೆ ಮಾರಾಟಗಾರರ ಲಾಭಾಂಶವನ್ನು ಕ್ವಿಂಟಾಲ್‍ಗೆ ನೀಡುತ್ತಿದ್ದ 87 ರೂಪಾಯಿ ಮೊತ್ತವನ್ನು 100 ರೂ.ಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ