ಜೈಪುರ:
ಪ್ರೀತಿಗೆ ಪೋಷಕರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮದುವೆ ಮಾಡಿಕೊಂಡ ಪ್ರೇಮಿಗಳು ಜೀವ ಉಳಿಸಿಕೊಳ್ಳಲು SP ಕಚೇರಿಗೆ ಓಡಿ ಬಂದ ಪ್ರಸಂಗ ರಾಜಸ್ತಾನದಲ್ಲಿ ನಡೆದಿದೆ.
ರಾಜಸ್ಥಾನದ ಜಲೋರ್‌ನಲ್ಲಿ ನವವಿವಾಹಿತ ದಂಪತಿ ತಮ್ಮ ಮನೆಯವರಿಂದ ಜೀವವನ್ನು ಉಳಿಸಲು ಎಸ್‍ಪಿ ಕಚೇರಿಗೆ ಓಡಿ ಬಂದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುವಕನೋರ್ನ ಯುವತಿಯ ಕೈ ಹಿಡಿದುಕೊಂಡು ಓಡುತ್ತಿದ್ದು, ಆಕೆಯ ಹಿಂದೆ ಇಬ್ಬರು ವ್ಯಕ್ತಿಗಳು ಅಟ್ಟಿಸಿಕೊಂಡು ಹೋಗುತ್ತಿರುವುದು ದಾಖಲಾಗಿದೆ. ಹಿಂದೆ ಬರುತ್ತಿದ್ದ ವ್ಯಕ್ತಿಯೋರ್ವ ಈ ದೃಶ್ಯಗಳನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.
ವರದಿಗಳ ಪ್ರಕಾರ, ಹುಡುಗ ಮತ್ತು ಹುಡುಗಿ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅವರು ಮದುವೆಯಾಗಲು ಬಯಸಿದ್ದರೂ ಕೂಡ ಅವರ ಕುಟುಂಬ ಸದಸ್ಯರು ಅದನ್ನು ವಿರೋಧಿಸಿದ್ದರು. ಇಬ್ಬರ ಕುಟುಂಬಗಳು ಅವರ ಇಚ್ಛೆಗೆ ವಿರುದ್ಧವಾಗಿ ಬೇರೆಯವರೊಂದಿಗೆ ನಿಶ್ಚಿತಾರ್ಥವನ್ನು ಏರ್ಪಡಿಸಿದ್ದರು. ಇದರಿಂದ ಬೇಸರಗೊಂಡ ಹುಡುಗ ಮತ್ತು ಹುಡುಗಿ ಮನೆಯಿಂದ ಓಡಿಹೋಗಿ ವಿವಾಹವಾಗಿದ್ದಾರೆ.
ಪ್ರೇಮ ವಿವಾಹದ ನಂತರ, ಅವರು ಕಲೆಕ್ಟರೇಟ್ ಕಚೇರಿಗೆ ಹೋಗಿದ್ದು, ಈ ವೇಳೆ ಹುಡುಗಿಯ ಕುಟುಂಬವು ಈ ಬಗ್ಗೆ ಸುದ್ದಿ ತಿಳಿದು ತಕ್ಷಣ ಕಲೆಕ್ಟರೇಟ್ ಆವರಣಕ್ಕೆ ಬಂದು ಹುಡುಗ ಮತ್ತು ಹುಡುಗಿಯನ್ನು ಸುತ್ತುವರೆದು ಹುಡುಗಿಯನ್ನು ಬಲವಂತವಾಗಿ ತಮ್ಮೊಂದಿಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಆಗ ಅವರಿಂದ ತಪ್ಪಿಸಿಕೊಂಡು ಹುಡುಗ ಮತ್ತು ಹುಡುಗಿ ನೇರವಾಗಿ ಎಸ್‍ಪಿ ಕಚೇರಿಯ ಕಡೆಗೆ ಓಡಿದ್ದಾರೆ. ಕುಟುಂಬ ಸದಸ್ಯರು ಅವರನ್ನು ತಡೆಯಲು ಪ್ರಯತ್ನಿಸುತ್ತಾ ಅವರನ್ನು ಬೆನ್ನಟ್ಟಿದ್ದಾರೆ.
