ಬಳ್ಳಾರಿ
ಇಲ್ಲಿನ ಸಂಗನಕಲ್ಲು ರಸ್ತೆಯಲ್ಲಿರುವ ಶ್ರೀ ಶೃಂಗೇರಿ ಶಾರದಾ ಶಂಕರಮಠದಲ್ಲಿ ಅ.9ರಿಂದ 19ರವರೆಗೆ ಶ್ರೀ ಶಾರದಾ ಶರನ್ನವರಾತ್ರಿ ಉತ್ಸವಗಳು ಶ್ರದ್ಧಾಭಕ್ತಿಯಿಂದ ಜರುಗುತ್ತಿವೆ.
ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಶೃಂಗೇರಿಯ ಆಡಳಿತಾಧಿಕಾರಿ ಡಾ.ವಿ.ಆರ್.ಗೌರೀಶಂಕರ್ ಅವರ ನೇತೃತ್ವದಲ್ಲಿ ಪ್ರತಿನಿತ್ಯ ಬೆಳಿಗ್ಗೆ 7 ಗಂಟೆಗೆ ಸಂಕಲ್ಪ ಪೂಜಾ, 7-30ರಿಂದ ಶ್ರೀಚಕ್ರಕ್ಕೆ ಮತ್ತು ಚಂದ್ರಮೌಳೀಶ್ವರ ಸ್ವಾಮಿಗೆ ಅಭಿಷೇಕ, 8-30ರಿಂದ ಕುಂಕುಮಾರ್ಚನೆ, 9 ಗಂಟೆಯಿಂದ ಸುಬ್ರಹ್ಮಣ್ಯ ಶಾಸ್ತ್ರಿಗಳು ಚಂಡಿ ಪಾರಾಯಣ ನೆರವೇರಿಸುತ್ತಿದ್ದಾರೆ. 11-30ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯುತ್ತಿದೆ.
ಸಂಜೆ 5-30ರಿಂದ ಭಕ್ತರಿಗಾಗಿ ಸಾಮೂಹಿಕ ಕುಂಕುಮಾರ್ಚನೆ, 6-30ಕ್ಕೆ ಪಲ್ಲಕ್ಕಿ ಸೇವೆ, 7-30ಕ್ಕೆ ವಿಪ್ರರಿಂದ ವೇದಘೋಷಗಳು ಮೊಳಗಲಿವೆ. ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ಬಳಿಕ ಪ್ರಸಾದ ಇರುತ್ತದೆ. ಶ್ರೀಮಠದ ಸೂರ್ಯನಾರಾಯಣ ಶರ್ಮ, ವೈ.ಸುರೇಶ್ ಶಾಸ್ತ್ರಿ, ಗೋಪಿನಾಥ ಶರ್ಮ, ರಾಮರಾವ್, ಸುಬ್ರಹ್ಮಣ್ಯ ಶರ್ಮ, ದತ್ತಾತ್ರೇಯ ಶರ್ಮ, ಜೆ.ಮೋಹನ ಶಾಸ್ತ್ರಿ, ವಿ.ಲೋಕನಾಥ, ಆರ್.ರಘುನಂದನ, ವಿ.ಮುರಳಿ, ಆರ್. ಶ್ರೀಧರ್ ಮತ್ತು ವೈ ರಂಗನಾಥರಾವ್ ಇವರುಗಳ ಸಹಕಾರದಿಂದ ಪ್ರತಿನಿತ್ಯ ವಿವಿಧ ಧಾರ್ಮಿಕ ಆಚರಣೆಗಳು ಸಾಂಗವಾಗಿ ಜರುಗಿಸಲು ವಿಪ್ರರು ಸಿದ್ಧತೆ ಮಾಡಿಕೊಂಡಿದ್ದಾರೆ.
ಈಗಾಗಲೇ ಶ್ರೀ ಶಾರದಾ ಮಾತೆಗೆ ಜಗತ್ಪ್ರಸೂತಿ ಅಲಂಕಾರ, ಹಂಸವಾಹನಾಲಂಕಾರ, ಮಯೂರ ವಾಹನಲಂಕಾರ, ಗರುಡವಾಹನಲಂಕಾರದಿಂದ ಪೂಜಿಸಲಾಗಿದ್ದು, ಬೆಂಗಳೂರಿನ ಖ್ಯಾತ ಗಾಯಕ ಜನಾರ್ಧನ್ ಸಂಗೀತ ಸೇವೆ ಸಲ್ಲಿಸಿದರು. ಇಂದು ಶ್ರೀ ಶಾರದಾಮಾತೆಗೆ ರಾಜರಾಜೇಶ್ವರಿ ಅಲಂಕಾರದಿಂದ ಪೂಜಿಸಲಾಗುತ್ತಿದೆ. ಅ.15ರಂದು ವೀಣಾ ಶಾರದಾಲಂಕಾರ, ಅ.16ರಂದು ಇಂದ್ರಾಣಿ ವಾಹನಲಂಕಾರ, ಅ.17ರಂದು ಸಿಂಹವಾಹನಲಂಕಾರ, ಅ.18ರಂದು ನವಚಂಡೀಕಾಲಂಕಾರ ಮತ್ತು ಅ.19ರಂದು ಗಜಲಕ್ಷ್ಮೀ ಅಲಂಕಾರದಿಂದ ಶಾರದಾ ಮಾತೆಯ ಪೂಜಾ ವಿಧಾನಗಳು ನೆರವೇರಲಿವೆ.
ಶ್ರೀ ಶಾರದಾ ಮಾತೆಗೆ ಸರ್ವ ಸೇವೆ, ಪುಷ್ಪಾಲಂಕಾರ ಸೇವೆ, ಪ್ರಾಕಾರೋತ್ಸವ, ಮಹಾ ಸಂಕಲ್ಪ ಸೇವೆ, ವಸ್ತ್ರಾಲಂಕಾರ ಸೇವೆ, ಸಾಮೂಹಿಕ ಚಂಡಿ ಹೋಮ, ವಾಹನಲಂಕಾರ ಸೇವೆ, ಪ್ರಸಾದ ವಿನಿಯೋಗ ಸೇವೆ ಮತ್ತು ಸಾಮೂಹಿಕ ಶ್ರೀಚಕ್ರಾರ್ಚನೆ ಸೇವೆ ಸಲ್ಲಿಸುವ ಭಕ್ತರು ಶ್ರೀ ಶಾರದಾ ಶಂಕರ ಸೇವಾ ಸಮಿತಿಯನ್ನು ಸಂಪರ್ಕಿಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
